ಬೆಂಗಳೂರು: ಮಾಜಿ ಸಚಿವ ಸಿ. ಎಚ್. ವಿಜಯ ಶಂಕರ್ ಹಾಗೂ ದಿವಂಗತ ಶಾಸಕ ಚಿಕ್ಕಮಾದು ಅವರ ಪುತ್ರ ಅನಿಲ್ ಚಿಕ್ಕಮಾದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ವಿಜಯ ಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಅನಿಲ್ ಚಿಕ್ಕಮಾದು ಜಿಲ್ಲಾ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ತೊರೆದು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯ ಶಂಕರ್ ಸಜ್ಜನ ಮತ್ತು ಪ್ರಾಮಾಣಿಕ ವ್ಯಕ್ತಿ, ಯಾವ ಪಕ್ಷದಲ್ಲಿರುತ್ತಾರೋ ಆ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ವಿಜಯ ಶಂಕರ್ ಬಿಜೆಪಿ ತೊರೆಯುತ್ತಿದ್ದಾರೆಂದು ಹೇಳಿದರು.
ಬಿಜೆಪಿಯಲ್ಲಿ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ನಳೀನ್ ಕುಮಾರ್ ಕಟೀಲ್ ಅವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಆಗಿದ್ದಾರೆ. ಈಶ್ವರಪ್ಪ ಎಂಬ ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲದ ವ್ಯಕ್ತಿ ಇದ್ದಾನೆ. ಅವನು ಸುಳ್ಳು ಹೇಳಿ ಎಂದು ಪಕ್ಷದ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಹೇಳಿಕೊಡುತ್ತಾನೆ ಎಂದು ಬಿಜೆಪಿ ನಾಯಕರ ವಿರುದ್ದ ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.
ವಿಜಯ ಶಂಕರ್ ಮತ್ತು ಅನಿಲ್ ಚಿಕ್ಕಮಾದು ಯಾವುದೇ ಷರತ್ತು ವಿಧಿಸದೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದು, ಪಕ್ಷಕ್ಕೆ ನಂಬಿ ಬಂದಿರುವ ಎಲ್ಲರಿಗೂ ನ್ಯಾಯ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎಚ್. ವಿಜಯಶಂಕರ್, ನಾನು ಪಕ್ಷಕ್ಕೆ ಸಮಸ್ಯೆಯೂ ಅಲ್ಲ, ಸಮಯ ಸಾಧಕನೂ ಅಲ್ಲ, ನಾನು ಶುದ್ಧ ಮನಸ್ಸಿನ ಸಮಾಜ ಸೇವಕ. ನನ್ನಿಂದ ಪಕ್ಷಕ್ಕಾಗಲಿ ನಾಯಕರಿಗಾಗಲೀ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ನಾನು ದೇವರಾಜ್ ಅರಸು ಅವರ ಸಿದ್ದಾಂತದಲ್ಲಿ ನಂಬಿಕೆ ಇಟ್ಟುಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ನಾಯಕರು ನಂಬಿ ಬಂದವರಿಗೆ ಅನ್ಯಾಯ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯ ಶಂಕರ್ ಹಾಗೂ ಅನಿಲ್ ಚಿಕ್ಕಮಾದು ಜೊತೆಗೆ ಅನೇಕ ಬೆಂಬಲಿಗರು ಬಿಜೆಪಿ ಸೇರ್ಪಡೆಯಾದರು.