“ಸಿಂಪಲ್ಲಾಗ್ ಇದ್ದೀನಿ ಅಂದಾಕ್ಷಣ ಡಮ್ಮಿ ಪೀಸ್ ಅಂದುಕೊಂಡಾ?’ – ಎದುರಾಳಿಗೆ ನಾಯಕ ಖಡಕ್ ಆಗಿ ಹೇಳುತ್ತಾನೆ. ಇಷ್ಟು ಹೇಳಿದ ಮೇಲೆ ನಾಯಕನ ಪವರ್ ಏನು ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಹೀಗೆ ಒಳಗೆ ಪವರ್‌ಫುಲ್ ಆಗಿರುವ ನಾಯಕ ಮೇಲ್ನೋಟಕ್ಕೆ ಎಲ್ಲವನ್ನು ಸಹಿಸಿಕೊಂಡು ಸೈಲೆಂಟಾಗಿ ಇರುತ್ತಾನೆ. ಆದರೆ, ವೈಲೆಂಟ್ ಆದ್ನೋ… ಕಥೆನೇ ಬೇರೆ… ಇಂತಹ ಪಕ್ಕಾ ಮಾಸ್ ಹಿನ್ನೆಲೆ ಇರುವ ಕಥೆ ಮೂಲಕ “ಬೈರಾಗಿ’ ತೆರೆಬಂದಿದೆ.
ಶಿವರಾಜ್‌ಕುಮಾರ್ ಅವರ ಮಾಸ್ ಇಮೇಜ್ ಅನ್ನು ಬಳಸಿಕೊಂಡು ಅದಕ್ಕೆ ಪೂರಕವಾಗಿ ಕಥೆ ಹೆಣೆದಿದ್ದಾರೆ ನಿರ್ದೇಶಕ ವಿಜಯ್ ಮಿಲ್ಟನ್. ಒಂದು ಮಾಸ್ ಸಿನಿಮಾದಲ್ಲಿ ಏನೆಲ್ಲಾ ಇರಬೇಕೋ, ಆ ಎಲ್ಲಾ ಅಂಶಗಳನ್ನು “ಬೈರಾಗಿ’ ಒಳಗೊಂಡಿದೆ.
ಹೀರೋನಾ ಕಲರ್‌ಫುಲ್ ಎಂಟ್ರಿ, ಹೈವೋಲ್ಟೇಜ್ ಫೈಟ್, ಜೊತೆಗೊಂದಿಷ್ಟು ಪಂಚಿಂಗ್ ಡೈಲಾಗ್… ಅಭಿಮಾನಿಗಳು ಎಂಜಾಯ್ ಮಾಡಲು ಇದಕ್ಕಿಂತ ಇನ್ನೇನು ಬೇಕು ಹೇಳಿ… ಹಾಗಂತ ಇಡೀ ಸಿನಿಮಾ ಕೇವಲ ಮಾಸ್ ಅಂಶಗಳೊಂದಿಗೆ ಸಾಗುತ್ತದೆ ಎಂದು ಹೇಳುವಂತಿಲ್ಲ. ಚಿತ್ರದಲ್ಲಿ ಸೆಂಟಿಮೆಂಟ್, ಲವ್‌ಸ್ಟೋರಿಯೂ ಇದೆ. ಆ ಮಟ್ಟಿಗೆ “ಬೈರಾಗಿ’ ಒಂದು ಕಂಪ್ಲೀಟ್ ಎಂಟರ್‌ಟೈ ನ್ಮೆಂಟ್ ಪ್ಯಾಕೇಜ್.
ಒಬ್ಬ ಸಾಮಾನ್ಯ ಮನುಷ್ಯ ತಿರುಗಿ ಬಿದ್ದರೆ ಏನಾಗುತ್ತದೆ ಎಂಬ ಅಂಶ ಒಂದು ಕಡೆಯಾದರೆ, ಅದೇ ವ್ಯಕ್ತಿಯ ಹೃದಯ ವೈಶಾಲ್ಯತೆಯ ಸುತ್ತ ಈ ಸಿನಿಮಾ ಸಾಗುತ್ತದೆ. ಈ ಹಾದಿಯಲ್ಲಿ ಸಾಕಷ್ಟು ಸನ್ನಿವೇಶಗಳು ಜರುಗುತ್ತವೆ, ಅದಕ್ಕೆ ನಾಯಕ ಹೇಗೆ ಪ್ರತಿಕ್ರಿಯಿಸುತ್ತಾನೆ, ಆತ ಅದನ್ನು ನಿಭಾಹಿಸುವ ರೀತಿ ಹೇಗಿದೆ ಎಂಬ ಅಂಶದೊಂದಿಗೆ ಸಾಗುವ ಸಿನಿಮಾ ಪ್ರೇಕ್ಷಕನನ್ನು ತನ್ನ ಜೊತೆಗೆ ಹೆಜ್ಜೆ ಹಾಕಿಸುವಲ್ಲಿ ಹಿಂದೆ ಬಿದ್ದಿಲ್ಲ.
ಇದನ್ನೂ ಓದಿ:ಬಾಸ್ಕೆಟ್‌ಬಾಲ್ ತಂಡಕ್ಕೆ ಇವರನ್ನು ಹುಡುಕಿಕೊಡಿ- ವಿಡಿಯೋ ವೈರಲ್
ಸಾಕಷ್ಟು ಏರಿಳಿತದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಈ ಚಿತ್ರದ ಹೈಲೈಟ್‌ಗಳಲ್ಲಿ ಶಿವಣ್ಣ ಹಾಗೂ ಧನಂಜಯ್ ನಡುವಿನ ದೃಶ್ಯಗಳು ಕೂಡಾ ಸೇರುತ್ತವೆ. ಹೈವೋಲ್ಟೇಜ್ ಫೈಟ್, ಕಣ್ಣಲ್ಲೇ ನಡೆಯುವ “ದೃಷ್ಟಿಯುದ್ಧ’ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶಾಂತರೂಪ, ಇನ್ನೊಂದು ಉಗ್ರರೂಪದ ಪಾತ್ರದಲ್ಲಿ ನಟಿಸಿರುವ ಶಿವಣ್ಣ, ಡ್ಯಾನ್ಸ್, ಫೈಟ್‌ನಲ್ಲಿ ಯುವಕರನ್ನು ನಾಚಿಸುತ್ತಾರೆ.
ಧನಂಜಯ್ ಅವರಿಗೂ ಸಖತ್ ರಗಡ್ ಆದ ಪಾತ್ರ ಸಿಕ್ಕಿದೆ. ನಾಯಕಿಯರಾದ ಅಂಜಲಿ ಹಾಗೂ ಯಶ ಅವರು ಬಂದು ಹೋಗುತ್ತಾರಷ್ಟೇ. ಉಳಿದಂತೆ ಶಶಿಕುಮಾರ್, ಶರತ್ ಲೋಹಿತಾಶ್ವ, ಪೃಥ್ವಿ ಅಂಬರ್ ನಟಿಸಿದ್ದಾರೆ. ಅನೂಪ್ ಸೀಳೀನ್ ಸಂಗೀತದ ಹಾಡುಗಳು ಸಿನಿಮಾದ ಖದರ್ ಹೆಚ್ಚಿಸಿದೆ
ರವಿಪ್ರಕಾಶ್ ರೈ