ಅಹಮದಾಬಾದ್: ಪಂಜಾಬ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ-2022ರ ಸೆಮಿ ಫೈನಲ್ ಪ್ರವೇಶ ಮಾಡಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 50 ಓವರ್ ಗಳಲ್ಲಿ 235 ರನ್ ಗಳಿಸಿದರೆ, ಕರ್ನಾಟಕ ತಂಡವು 49.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಪಂದ್ಯದಲ್ಲಿ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿತು. ಪ್ರಭಸಿಮ್ರನ್ ಗೋಲ್ಡನ್ ಡಕ್ ಗೆ ಔಟಾದರು. ಒಂದೆಡೆ ಪಂಜಾಬ್ ಸತತ ವಿಕೆಟ್ ಕಳೆದುಕೊಂಡರೂ ಅಭಿಷೇಕ್ ಶರ್ಮಾ ನಿಂತು ಆಡಿದರು. 123 ಎಸೆತ ಎದುರಿಸಿದ ಶರ್ಮಾ 109 ರನ್ ಗಳಿಸಿದರು. ಉಳಿದಂತೆ ಸನ್ವೀರ್ ಸಿಂಗ್ 39 ರನ್, ಅನ್ಮೋಲ್ ಮಲ್ಹೋತ್ರಾ 29 ರನ್ ಮಾಡಿದರು. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ ನಾಲ್ಕು ವಿಕೆಟ್, ರೋನಿತ್ ಮೋರೆ ಎರಡು ವಿಕೆಟ್, ವಿ ಕೌಶಿಕ್, ಮನೋಜ್ ಭಂಡಗೆ ಮತ್ತು ಗೌತಮ್ ತಲಾ ಒಂದು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ಕರ್ನಾಟಕ ತಂಡವೂ ಆರಂಭದಲ್ಲಿ ನಾಯಕ ಮಯಾಂಕ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ರವಿಕುಮಾರ್ ಸಮರ್ಥ್ 71 ರನ್ ಗಳಿಸಿ ಆಧಾರ ನೀಡಿದರು. ಅನುಭವಿಗಳಾದ ಮನೀಷ್ ಪಾಂಡೆ 35 ರನ್, ಶ್ರೇಯಸ್ ಗೋಪಾಲ್ 42 ರನ್, ನಿಕಿನ್ ಜೋಸ್ 29 ರನ್ ಮಾಡಿದರು. ಕೊನೆಯಲ್ಲಿ ಮನೋಜ್ ಭಂಡಗೆ ಅಜೇಯ 25 ರನ್ ಮಾಡಿದರು. ಕೊನೆಯಲ್ಲಿ ಸಿಕ್ಸರ್ ಮೂಲಕ ತಂಡಕ್ಕೆ ಜಯ ತಂದಿತ್ತರು.
ನಾಲ್ಕು ವಿಕೆಟ್ ಕಿತ್ತ ವಿಧ್ವತ್ ಕಾವೇರಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.