Advertisement

Cricket: ವಿಜಯ ಹಜಾರೆ ಟ್ರೋಫಿ ಕ್ರಿಕೆಟ್‌- ಕರ್ನಾಟಕ ತಂಡಕ್ಕೆ ಆರನೇ ಗೆಲುವು

11:39 PM Dec 05, 2023 | Team Udayavani |

ಅಹ್ಮದಾಬಾದ್‌: ಉತ್ತಮ ಫಾರ್ಮ್ನಲ್ಲಿರುವ ಕರ್ನಾಟಕ ತಂಡವು ವಿಜಯ ಹಜಾರೆ ಟ್ರೋಫಿ ಕ್ರಿಕೆಟ್‌ ಕೂಟದ “ಸಿ’ ಬಣದ ಪಂದ್ಯದಲ್ಲಿ ಮಂಗಳವಾರ ಮಿಜೋರಾಂ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದು ಕರ್ನಾಟಕ ಈ ಕೂಟದಲ್ಲಿ ಆಡಿದ ಏಳು ಪಂದ್ಯಗಳಿಂದ ದಾಖಲಿಸಿದ ಆರನೇ ಗೆಲುವು ಆಗಿದೆ.

Advertisement

ಒಟ್ಟಾರೆ 24 ಅಂಕ ಪಡೆದಿರುವ ಕರ್ನಾಟಕವಲ್ಲದೇ ಹರಿಯಾಣ (28 ಅಂಕ), ರಾಜಸ್ಥಾನ (24), ವಿದರ್ಭ (20), ಮುಂಬಯಿ (20) ಮತ್ತು ತಮಿಳುನಾಡು (20) ನೇರವಾಗಿ ಕ್ವಾರ್ಟರ್‌ಫೈನಲಿಗೆ ಪ್ರವೇಶಿಸಿವೆ. “ಸಿ’ ಬಣದಲ್ಲಿರುವ ಹರಿಯಾಣ ಆಡಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿ ಗರಿಷ್ಠ 28 ಅಂಕ ಪಡೆದ ಸಾಧನೆ ಮಾಡಿದೆ.

ಕರ್ನಾಟಕಕ್ಕೆ ಗೆಲುವು
ಅಹ್ಮದಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ತಂಡವು ಮಿಜೋರಾಂ ತಂಡವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಮಿಜೋರಾಂ ತಂಡವು ವಾಸುಕಿ ಕೌಶಿಕ್‌ ಮತ್ತು ಕೃಷ್ಣಪ್ಪ ಗೌತಮ್‌ ಅವರ ದಾಳಿಗೆ ಕುಸಿದು 37.2 ಓವರ್‌ಗಳಲ್ಲಿ 124 ರನ್ನಿಗೆ ಆಲೌಟಾಯಿತು. ಕೌಶಿಕ್‌ ಕೇವಲ 7 ರನ್ನಿಗೆ 4 ವಿಕೆಟ್‌ ಹಾರಿಸಿದರೆ ಗೌತಮ್‌ 49 ರನ್ನಿಗೆ 3 ವಿಕೆಟ್‌ ಪಡೆದರು.

ಗೆಲ್ಲಲು ಸುಲಭ ಸವಾಲು ಪಡೆದ ಕರ್ನಾಟಕ ತಂಡವು 17.1 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ 126 ರನ್‌ ಗಳಿಸಿ ಜಯಭೇರಿ ಬಾರಿಸಿತು. 46 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ತಂಡವನ್ನು ನಾಯಕ ಮಯಾಂಕ್‌ ಅಗರ್ವಾಲ್‌ ಮತ್ತು ಮನೀಶ್‌ ಪಾಂಡೆ ಆಧರಿಸಿದರು. ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 80 ರನ್‌ ಪೇರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಅಗರ್ವಾಲ್‌ ಅಂತಿಮವಾಗಿ 48 ರನ್‌ ಗಳಿಸಿ ಅಜೇಯರಾಗಿ ಉಳಿದರು.

ದಿಲ್ಲಿ ಹೊರಕ್ಕೆ
ಈ ಕೂಟದಲ್ಲಿ ನಾಲ್ಕನೇ ಬಾರಿ ಸೋಲನ್ನು ಕಂಡ ದಿಲ್ಲಿ ತಂಡವು ಹೊರಬಿತ್ತು. ದಿಲ್ಲಿ ಆಡಿದ 7 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು 12 ಅಂಕಗಳೊಂದಿಗೆ “ಸಿ’ ಬಣದಲ್ಲಿ ಐದನೇ ಸ್ಥಾನ ಪಡೆಯಿತು. ಮಂಗಳವಾರದ ಪಂದ್ಯದಲ್ಲಿ ದಿಲ್ಲಿ ತಂಡವು ಉತ್ತರಖಂಡ ತಂಡದೆದುರು 51 ರನ್ನುಗಳಿಂದ ಸೋಲನ್ನು ಕಂಡಿತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಉತ್ತರಖಂಡ 45.5 ಓವರ್‌ಗಳಲ್ಲಿ 221 ರನ್ನಿಗೆ ಆಲೌಟಾಯಿತು. ನವದೀಪ್‌ ಸೈನಿ 23 ರನ್ನಿಗೆ 3 ವಿಕೆಟ್‌ ಪಡೆದರೆ ಹರ್ಷ ತ್ಯಾಗಿ 30 ರನ್ನಿಗೆ 3 ವಿಕೆಟ್‌ ಪಡೆದರು. ಇದಕ್ಕುತ್ತರವಾಗಿ ದಿಲ್ಲ ತಂಡವು ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ 46.2 ಓವರ್‌ಗಳಲ್ಲಿ 170 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.

ಮುಂಬಯಿಗೆ ಸೋಲು
“ಎ’ ಬಣದ ಪಂದ್ಯದಲ್ಲಿ ಮುಂಬಯಿ ತಂಡವು ಒಡಿಶಾ ವಿರುದ್ಧ 86 ರನ್ನುಗಳಿಂದ ಸೋಲನ್ನು ಕಂಡರೂ ಕ್ವಾರ್ಟರ್‌ಫೈನಲ್‌ ಹಂತಕ್ಕೇರಲು ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಒಡಿಶಾ ತಂಡವು 50 ಓವರ್‌ಗಳಲ್ಲಿ 9 ವಿಕೆಟಿಗೆ 199 ರನ್‌ ಗಳಿಸಿತ್ತು. ಕಾರ್ತಿಕ್‌ ಬಿಸ್ವಾಲ್‌ 64 ರನ್‌ ಗಳಿಸಿದ್ದರೆ ಮೋಹಿತ್‌ ಅವಾಸ್ತಿ 30 ರನ್ನಿಗೆ 3 ವಿಕೆಟ್‌ ಪಡೆದ್ದಿದರು. ಗೆಲ್ಲಲು 200 ರನ್‌ ಗಳಿಸುವ ಸವಾಲು ಪಡೆದ ಮುಂಬಯಿ ತಂಡವು ಒಡಿಶಾದ ದಾಳಿಗೆ ಕುಸಿದು 32.2 ಓವರ್‌ಗಳಲ್ಲಿ 113 ರನ್ನಿಗೆ ಆಲೌಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next