Advertisement

Vijay Hazare Trophy: ಪಡಿಕ್ಕಲ್‌ ಶತಕ; ಕರ್ನಾಟಕ ವಿಜಯ

11:53 PM Nov 25, 2023 | Team Udayavani |

ಅಹ್ಮದಾಬಾದ್‌: ದೇವದತ್ತ ಪಡಿಕ್ಕಲ್‌ ಅವರ ಶತಕ ಪರಾಕ್ರಮ ಹಾಗೂ ವಾಸುಕಿ ಕೌಶಿಕ್‌ ಅವರ ಘಾತಕ ಬೌಲಿಂಗ್‌ ನೆರವಿನಿಂದ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶನಿವಾರ ಇಲ್ಲಿನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ರಾಜ್ಯ ತಂಡ ಉತ್ತರಾಖಂಡವನ್ನು 52 ರನ್ನುಗಳಿಂದ ಮಣಿಸಿತು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ 7 ವಿಕೆಟಿಗೆ 284 ರನ್‌ ಪೇರಿಸಿದರೆ, ಇದಕ್ಕೆ ದಿಟ್ಟ ಉತ್ತರ ನೀಡುವಲ್ಲಿ ವಿಫ‌ಲವಾದ ಉತ್ತರಾಖಂಡ 9 ವಿಕೆಟ್‌ ನಷ್ಟಕ್ಕೆ 232 ರನ್‌ ಬಾರಿಸಿ ಶರಣಾಯಿತು.

“ಸಿ’ ವಿಭಾಗದ ಮೊದಲ ಪಂದ್ಯದಲ್ಲಿ ಕರ್ನಾಟಕ 222 ರನ್ನುಗಳ ಬೃಹತ್‌ ಅಂತರದಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿತ್ತು. ಇನ್ನೊಂದೆಡೆ ಉತ್ತರಾಖಂಡ ಮೊದಲ ಲೀಗ್‌ ಪಂದ್ಯದಲ್ಲಿ ಹರ್ಯಾಣಕ್ಕೆ 6 ವಿಕೆಟ್‌ಗಳಿಂದ ಶರಣಾಗಿತ್ತು.

ಪಡಿಕ್ಕಲ್‌ ಶತಕ ಪರಾಕ್ರಮ
ವನ್‌ಡೌನ್‌ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಅವರ 117 ರನ್‌ ಸಾಹಸ ಕರ್ನಾಟಕ ಸರದಿಯ ಆಕರ್ಷಣೆ ಆಗಿತ್ತು. ನಿಕಿನ್‌ ಜೋಸ್‌ (72) ಮತ್ತು ಮನೀಷ್‌ ಪಾಂಡೆ (56) ಅರ್ಧ ಶತಕದ ಕೊಡುಗೆ ಸಲ್ಲಿಸಿದರು.

ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅಮೋಘ ಶತಕ ಬಾರಿಸಿ ಮೊದಲ ವಿಕೆಟಿಗೆ 267 ರನ್‌ ಪೇರಿಸಿದ್ದ ಆರ್‌. ಸಮರ್ಥ್ (11) ಮತ್ತು ನಾಯಕ ಮಾಯಾಂಕ್‌ ಅಗರ್ವಾಲ್‌ (0) ಇಲ್ಲಿ ವಿಫ‌ಲರಾದರು. ಹೀಗಾಗಿ ಪಡಿ ಕ್ಕಲ್‌ ಮೊದಲ ಓವರ್‌ನಲ್ಲೇ ಕ್ರೀಸ್‌ ಇಳಿಯಬೇಕಾಯಿತು. 38ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದ ಅವರು 122 ಎಸೆತಗಳಿಂದ 117 ರನ್‌ ಬಾರಿಸಿ ದರು. ಈ ಪ್ರಚಂಡ ಬ್ಯಾಟಿಂಗ್‌ ವೇಳೆ 13 ಬೌಂಡರಿ, 5 ಸಿಕ್ಸರ್‌ ಸಿಡಿದವು.

Advertisement

ನಿಕಿನ್‌ ಜೋಸ್‌ ಅವರ 72 ರನ್‌ 82 ಎಸೆತಗಳಿಂದ ಬಂತು. ಸಿಡಿಸಿದ್ದು 3 ಫೋರ್‌, 3 ಸಿಕ್ಸರ್‌. ಪಡಿಕ್ಕಲ್‌-ಜೋಸ್‌ ಜತೆಯಾಟದಲ್ಲಿ 131 ರನ್‌ ಒಟ್ಟು ಗೂಡಿತು. ಮನೀಷ್‌ ಪಾಂಡೆ ಕೂಡ ಆಕ್ರಮಣಕಾರಿ ಆಟವಾಡಿದರು. 40 ಎಸೆತಗಳಿಂದ 56 ರನ್‌ ಬಂತು. 4 ಬೌಂಡರಿ, 3 ಸಿಕ್ಸರ್‌ ಬಾರಿಸಿ ಅಪಾಯ ಕಾರಿಯಾಗಿ ಗೋಚರಿಸಿದರು.

ಚೇಸಿಂಗ್‌ ವೇಳೆ ಉತ್ತರಾಖಂಡಕ್ಕೆ ದೊಡ್ಡ ಮಟ್ಟದ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಆದರೆ 8ನೇ ಕ್ರಮಾಂಕದಲ್ಲಿ ಆಡಲು ಬಂದ ಕುಣಾಲ್‌ ಚಂದೇಲಾ ಪ್ರಚಂಡ ಆಟವಾಡಿ 98 ರನ್‌ ಬಾರಿಸುವಲ್ಲಿ ಯಶಸ್ವಿಯಾದರು. ಕರ್ನಾಟಕದ ಮುಂದಿನ ಎದುರಾಳಿ ದಿಲ್ಲಿ. ಈ ಪಂದ್ಯ ಸೋಮವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next