Advertisement

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

11:34 PM Feb 26, 2021 | Team Udayavani |

ಬೆಂಗಳೂರು: “ಟಾಪ್‌ ಫಾರ್ಮ್’ನಲ್ಲಿರುವ ಆರಂಭಕಾರ ದೇವದತ್ತ ಪಡಿಕ್ಕಲ್‌ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸತತ 2ನೇ ಶತಕ ಬಾರಿಸಿದ್ದಾರೆ. ಕರ್ನಾಟಕ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಶುಕ್ರವಾರದ ಮುಖಾಮುಖೀಯಲ್ಲಿ ಆರ್‌. ಸಮರ್ಥ್ ಪಡೆ ಕೇರಳವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿತು.

Advertisement

ಕರ್ನಾಟಕದ ಮಾಜಿ ಆಟಗಾರ ರಾಬಿನ್‌ ಉತ್ತಪ್ಪ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡರೂ, ಮುಂದಿನ ಓವರಿನಲ್ಲೇ ಸಂಜು ಸ್ಯಾಮ್ಸನ್‌ (3) ಔಟಾದರೂ ಕೇರಳ 8 ವಿಕೆಟಿಗೆ 277 ರನ್ನುಗಳ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಜವಾಬಿತ್ತ ಕರ್ನಾಟಕ 45.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 279 ರನ್‌ ಬಾರಿಸಿ “ಸಿ’ ವಿಭಾಗದ ಅಗ್ರಸ್ಥಾನಿಯಾಯಿತು.

ಪಡಿಕ್ಕಲ್‌ ಪ್ರಚಂಡ ಬ್ಯಾಟಿಂಗ್‌ :

ಪ್ರಚಂಡ ಬ್ಯಾಟಿಂಗ್‌ ಮುಂದುವರಿಸಿದ ಪಡಿಕ್ಕಲ್‌ 126 ರನ್‌ ಬಾರಿಸಿ ಅಜೇಯರಾಗಿ ಉಳಿದರು (138 ಎಸೆತ, 13 ಬೌಂಡರಿ, 2 ಸಿಕ್ಸರ್‌). ನಾಯಕ ಆರ್‌. ಸಮರ್ಥ್ 51 ಎಸೆತ ಎದುರಿಸಿ 62 ರನ್‌ ಮಾಡಿದರು. ಇವರಿಂದ ಆರಂಭಿಕ ವಿಕೆಟಿಗೆ 99 ರನ್‌ ಒಟ್ಟುಗೂಡಿತು. ವನ್‌ಡೌನ್‌ ಬ್ಯಾಟ್ಸ್‌ಮನ್‌ ಕೆ. ಸಿದ್ಧಾರ್ಥ್ ಔಟಾಗದೆ 86 ರನ್‌ ಹೊಡೆದರು (84 ಎಸೆತ, 5 ಬೌಂಡರಿ, 3 ಸಿಕ್ಸರ್‌). ಮುರಿಯದ ದ್ವಿತೀಯ ವಿಕೆಟಿಗೆ 180 ರನ್‌ ಹರಿದು ಬಂತು.

ಪಡಿಕ್ಕಲ್‌ ಒಡಿಶಾ ವಿರುದ್ಧದ ಕಳೆದ ಪಂದ್ಯದಲ್ಲಿ 152 ರನ್ನುಗಳ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಕೂಟದ 4 ಪಂದ್ಯಗಳಿಂದ ಅವರ ರನ್‌ ಗಳಿಕೆ 427ಕ್ಕೆ ಏರಿದೆ.

Advertisement

ಕೇರಳ ಸರದಿಯಲ್ಲಿ ವತ್ಸಲ್‌ ಗೋವಿಂದ್‌ 95, ನಾಯಕ ಸಚಿನ್‌ ಬೇಬಿ 54, ಅಜರುದ್ದೀನ್‌ ಔಟಾಗದೆ 59 ರನ್‌ ಮಾಡಿದರು. ಉತ್ತಪ್ಪ ಅವರನ್ನು ಮೊದಲ ಎಸೆತದಲ್ಲೇ ಕೆಡವಿದ ಮಿಥುನ್‌ ಸಾಧನೆ 52ಕ್ಕೆ 5 ವಿಕೆಟ್‌. ಪ್ರಸಿದ್ಧ್ ಕೃಷ್ಣ 2 ವಿಕೆಟ್‌ ಕಿತ್ತರು.

ರವಿವಾರದ ಕೊನೆಯ ಲೀಗ್‌ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್‌ ವಿರುದ್ಧ ಆಡಲಿದೆ.

ಸಂಕ್ಷಿಪ್ತ ಸ್ಕೋರ್‌: ಕೇರಳ-8 ವಿಕೆಟಿಗೆ 277 (ವತ್ಸಲ್‌ ಗೋವಿಂದ್‌ 95, ಅಜರುದ್ದೀನ್‌ ಔಟಾಗದೆ 59, ಸಚಿನ್‌ ಬೇಬಿ 54, ಮಿಥುನ್‌ 52ಕ್ಕೆ 5, ಪ್ರಸಿದ್ಧ್ ಕೃಷ್ಣ 65ಕ್ಕೆ 2). ಕರ್ನಾಟಕ-45.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 279 (ಪಡಿಕ್ಕಲ್‌ ಔಟಾಗದೆ 126, ಸಿದ್ಧಾರ್ಥ್ ಔಟಾಗದೆ 86, ಸಮರ್ಥ್ 62, ಜಲಜ್‌ ಸಕ್ಸೇನಾ 34ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next