Advertisement

1971ರ ಭಾರತ, ಪಾಕ್ ಯುದ್ಧ- ಬಾಂಗ್ಲಾದೇಶ ಉದಯ; ಏನಿದು ವಿಜಯ್ ದಿವಸ್ ಸಂಭ್ರಮ

11:00 AM Dec 16, 2020 | Nagendra Trasi |

ನವದೆಹಲಿ: ನೆರೆಯ ಬಾಂಗ್ಲಾದೇಶದ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಪಾಕ್ ವಿರುದ್ಧದ ಸಮರದಲ್ಲಿ ಭಾರತೀಯ ಸೇನೆ ಜಯ ಸಾಧಿಸಿದ ದಿನವನ್ನೇ ವಿಜಯ್ ದಿವಸ್ ಎಂದು ದೇಶಾದ್ಯಂತ ಆಚರಿಸಲಾಗುತ್ತಿದೆ.

Advertisement

ಇಂದು (ಡಿಸೆಂಬರ್ 16, 2020) ದೇಶಾದ್ಯಂತ ಪಾಕ್ ವಿರುದ್ಧ ಭಾರತ ಸೇನೆ ಗೆಲುವು ಸಾಧಿಸಿದ್ದ ವಿಜಯ್ ದಿವಸದ 50ನೇ ವರ್ಷಾಚರಣೆ ಸಂಭ್ರಮ. 1971ರಲ್ಲಿ ನಡೆದ ಭಾರತ ಪಾಕ್ ಯುದ್ಧದಲ್ಲಿ ಪಾಕ್ ಸೇನಾಪಡೆಯ ಜನರಲ್ ಎಎ ಖಾನ್ ನಿಯಾಝಿ ಸೇರಿದಂತೆ 93 ಸಾವಿರ ಪಾಕ್ ಸೈನಿಕರು ಬೇಷರತ್ ಆಗಿ ಭಾರತದ ಸೇನೆ ಮುಂದೆ ಶರಣಾಗಿತ್ತು.

ಏನಿದು ವಿಜಯ್ ದಿವಸ್?

ಬಂಗಾಳಿ ಮುಸ್ಲಿಮರು ಮತ್ತು ಹಿಂದೂಗಳನ್ನು ರಕ್ಷಿಸುವ ನಿಟ್ಟಿನಲ್ಲಿ 1971ರ ಡಿಸೆಂಬರ್ 03ರಂದು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸಲು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಕೇವಲ 13 ದಿನಗಳ ಕಾಲ ಭಾರತ ಮತ್ತು ಪಾಕ್ ಯೋಧರ ನಡುವೆ ಸಮರ ನಡೆದಿತ್ತು. ಕೊನೆಗೂ ಧೀರ ಭಾರತೀಯ ಯೋಧರ ಶಕ್ತಿಯ ಮುಂದೆ ಪಾಕ್ ಸೇನೆ ಮಂಡಿಯೂರಿತ್ತು. ಡಿಸೆಂಬರ್ 16ರಂದು ಪಾಕ್ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನೇತೃತ್ವದ 93 ಸಾವಿರ ಸೈನಿಕರ ಪಡೆಯು ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಸೇನೆಗೆ ಶರಣಾಗಿತ್ತು.

Advertisement

ಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಜನ್ಮತಳೆದಿತ್ತು. ಪ್ರತಿವರ್ಷ ಡಿಸೆಂಬರ್ 16ರಂದು ಭಾರತ ವಿಜಯ್ ದಿವಸ್ ಆಚರಿಸಿದರೆ, ಬಾಂಗ್ಲಾದೇಶ ಸ್ವಾತಂತ್ರ್ಯೋತ್ಸವ ಆಚರಿಸುತ್ತದೆ.

ಕೊಲೆ, ಅತ್ಯಾಚಾರ-9ಮಿಲಿಯನ್ ಜನರು ಭಾರತಕ್ಕೆ ನುಸುಳಿದ್ದರು!

1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದಾಗಿ ಒಂಬತ್ತು ಮಿಲಿಯನ್ ನಿರಾಶ್ರಿತರು ಭಾರತದೊಳಕ್ಕೆ ನುಸುಳುವಂತೆ ಆಗಿತ್ತು. ಈ ವೇಳೆ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯವನ್ನು ವಿರೋಧಿಸಿದ ಬಾಂಗ್ಲಾದೇಶಕ್ಕೆ ಭಾರತ ಬೆಂಬಲ ನೀಡಿತ್ತು.

ಬಾಂಗ್ಲಾದೇಶ ವಿಮೋಚನೆಗೆ ಭಾರತ ಬೆಂಬಲ ನೀಡಿದ್ದು, ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್ ಗೆ ತೀವ್ರ ಹಿನ್ನಡೆಯಾದಂತಾಗಿತ್ತು. ಅಲ್ಲದೇ 1971ರ ಡಿಸೆಂಬರ್ 3ರಂದು ಪೂರ್ವ ಪಾಕಿಸ್ತಾನದ ಜನರನ್ನು ರಕ್ಷಿಸುವ ನಿಟ್ಟನಲ್ಲಿ ಪಾಕಿಸ್ತಾನದ ವಿರುದ್ಧ ಸಮರ ನಡೆಸಲು ಸಜ್ಜಾಗಿ ಎಂದು ಭಾರತೀಯ ಸೇನೆಗೆ ಭಾರತದ ಸರ್ಕಾರ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next