Advertisement

Madhugiri: ಚಿಕಿತ್ಸೆಗಾಗಿ ಲಂಚ… ಮಧುಗಿರಿ ಆಸ್ಪತ್ರೆ ವೈದ್ಯರ ಮೇಲೆ ದೂರುಗಳ ಅನಾವರಣ

06:09 PM Dec 14, 2023 | Team Udayavani |

ಮಧುಗಿರಿ: ಕಳೆದ ವಾರ ಪ್ರಮಾಣ ಪತ್ರಕ್ಕಾಗಿ ಹಣ ಪಡೆದು ಅಮಾನತ್ತಾದ ಇಬ್ಬರು ವೈದ್ಯರ ಪ್ರಕರಣ ಮಾಸುವ ಮುನ್ನವೇ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿ ತಂಡ ಭೇಟಿ ನೀಡಿದ್ದು ವೈದ್ಯರ ಮೇಲೆ ಸಾರ್ವಜನಿಕರ ಆರೋಪಗಳು ಹಾಗೂ ದೂರುಗಳ ಅನಾವರಣವಾಗಿದ್ದು
ಚಿಕಿತ್ಸೆಗಾಗಿ ಲಂಚ ಪಡೆದ ಆರೋಪಗಳನ್ನು ಸ್ಥಳದಲ್ಲಿದ್ದ ವೈದ್ಯರು ಎದುರಿಸಬೇಕಾಯಿತು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬೆಳಗ್ಗೆ 9.30ಕ್ಕೆ ಭೇಟಿ ನೀಡಿದ ರಾಜ್ಯ ಆರೋಗ್ಯ ಇಲಾಖೆಯ ಜಾಗೃತ ದಳದ ಅಧಿಕಾರಿ ಶ್ರೀನಿವಾಸ್ ಅವರ ತಂಡ ದಾಖಲೆಗಳನ್ನು ಪರಿಶೀಲಿಸಿತು. ಶೌಚಾಲಯಗಳು ವಾರ್ಡ್ ಗಳಲ್ಲಿನ ಸ್ವಚ್ಛತೆ ಹಾಗೂ ಒಳ ರೋಗಿಗಳಿಗೆ ನೀಡುವ ಉಪಹಾರ ಊಟದ ಬಗ್ಗೆ ವಿಚಾರಿಸಿದರು. ಊಟ ಹಾಗೂ ಸ್ವಚ್ಛತೆಯ ಬಗ್ಗೆ ಸಮಾಧಾನಗೊಂಡ ಅಧಿಕಾರಿ ಶುದ್ಧ ಕುಡಿಯುವ ನೀರು ಬಿಸಿ ನೀರಿನ ಅಲಭ್ಯತೆಯ ಬಗ್ಗೆ ಹಾಗೂ ಚಿಕಿತ್ಸೆಗೆ ಮತ್ತು ಕನ್ನಡಕಕ್ಕೆ ಹಣ ಪಡೆದ ಬಗ್ಗೆ ಕೇಳಿಬಂದ ದೂರಿಗೆ ಗರಂ ಆದರು.

ಹೆರಿಗೆಗೆ 5000 ಕೇಳಿದ ಸಿಬ್ಬಂದಿ,

ಬಾಲ್ಯ ಗ್ರಾಮದ ಮಹಿಳೆ ಒಬ್ಬರಿಗೆ ಹೆರಿಗೆಯಾಗಿದ್ದು ಚಿಕಿತ್ಸೆಗಾಗಿ ಅನಸೂಯ ಎಂಬ ನರ್ಸ್ 5000 ಹಣ ಪಡೆದಿದ್ದಾರೆಂದು ಆರೋಪ ಕೇಳಿ ಬಂದಿತು. ತಕ್ಷಣ ಹಣ ಕೊಟ್ಟವರಿಂದಲೇ ದೂರವಾಣಿ ಕರೆ ಮಾಡಿಸಿದ ಅಧಿಕಾರಿಗಳು ಹಣ ಪಡೆದಿದ್ದು ನಿಜ ಎಂಬ ಅಂಶ ಬೆಳಕಿಗೆ ಬಂತು. ಇದರಲ್ಲಿ 2 ಸಾವಿರ ಡಾಕ್ಟರ್ ಸುಷ್ಮಾ ರವರಿಗೆ ಉಳಿದದ್ದನ್ನು ಎಲ್ಲರಿಗೂ ಹಂಚಬೇಕು ಎನ್ನುವ ನರ್ಸ್ ಅನುಸೂಯರವರ ಮಾತನ್ನು ದಾಖಲಿಸಿಕೊಂಡರು. ಜೊತೆಗೆ ಹಣ ಕೊಟ್ಟವರಿಂದ ಲಿಖಿತ ದೂರು ಪಡೆಯಲಾಯಿತು. ನಂತರ ಹೊರಗಡೆಯಿಂದ ಮಾತ್ರೆ ಔಷಧವನ್ನು ತರಿಸಲಾಗುತ್ತಿದ್ದು ಇಲ್ಲಿ ಮಾತ್ರೆ ಹಾಗೂ ಔಷಧವನ್ನು ಮುಖ್ಯವಾಗಿ ನೀಡಬೇಕಿದ್ದು ಹೊರಗಡೆಯಿಂದ ತರುವಂತೆ ತಿಳಿಸಿದ ವೈದ್ಯರ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದರು. ನಂತರ ಬಾಲ್ಯ ಆಸ್ಪತ್ರೆಗೆ ತೆರಳಿ ಲಂಚ ಪಡೆದ ನರ್ಸ್ ಗೆ ಎಚ್ಚರಿಕೆ ನೀಡಿ ಹಣವನ್ನ ಮಹಿಳೆಗೆ ವಾಪಸ್ ಕೊಡಿಸಿದರು.

ಕನ್ನಡಕಕ್ಕೆ 3000 ಲಂಚ

Advertisement

ಮತ್ತೊಮ್ಮೆ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯ ಡಾ. ಗಂಗಾಧರ್ ರವರು ಕನ್ನಡಕ ನೀಡಲು 3000 ಹಣ ಪಡೆದಿದ್ದಾರೆಂದು ಸ್ಥಳೀಯ ರಂಗನಾಥ್ ಹಾಗೂ ಲಹರಿಕಾ ಎಂಬ ವಿದ್ಯಾರ್ಥಿನಿ ಹಾಗೂ ಇತರೆಯವರು ಒಂದೂವರೆ ಸಾವಿರ ಹಣ ನೀಡಿದ್ದಾಗಿ ವೈದ್ಯರ ಸಮ್ಮುಖವೇ ಅಧಿಕಾರಿ ಶ್ರೀನಿವಾಸ್ ಗಮನಕ್ಕೆ ತಂದರು. ತಕ್ಷಣ ನೊಂದವರಿಂದ ಲಿಖಿತ ದೂರು ಪಡೆಯಲಾಯಿತು. ಕೊನೆಗೆ ಮತ್ತೆ ಇಂತಹ ತಪ್ಪುಗಳು ನಡೆಯದಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದ ಗಂಗಾಧರ್ ರಂಗನಾಥ್ ರವರಿಗೆ 3800 ಹಾಗೂ ವಿದ್ಯಾರ್ಥಿ ನಿಗೆ ಒಂದು ವರ್ಷದ ಪಡೆದ 1300 ಗಳನ್ನು ವಾಪಸ್ ಮಾಡಿದರು.

ನೀರು ಕುಡಿಯಲು ವೈದ್ಯರಿಗೆ ಒತ್ತಾಯ

ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿಲ್ಲ ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಶುದ್ಧ ಹಾಗೂ ಬಿಸಿ ನೀರನ್ನು ಹೊರಗಡೆಯಿಂದ ತರಬೇಕಿದ್ದು ಶುದ್ಧ ಕುಡಿಯುವ ಘಟಕವಿದ್ದರೂ ನೀರು ಸರಿಯಾಗಿಲ್ಲ ಎಂಬ ಆರೋಪ ಎದುರಾಯಿತು. ತಕ್ಷಣ ಸಮಜಾಯಿಸಿ ನೀಡಿದ ವೈದ್ಯಾಧಿಕಾರಿ ಡಾ. ಗಂಗಾಧರ್ ಶುದ್ಧ ನೀರಿನ ಘಟಕವಿದೆ ಎಂದರು. ನೆರೆದಿದ್ದ ಸಾರ್ವಜನಿಕರು ಹಾಗಾದರೆ ವೈದ್ಯರು ಈ ನೀರು ಕುಡಿದು ತೋರಿಸಲಿ ಎದ್ದಾಗ ತಬ್ಬಿಬ್ಬಾದ ವೈದ್ಯರು ಕೊನೆಗೆ ನೀರು ಕುಡಿಯಲಿಲ್ಲ. ಇದು ಸಾರ್ವಜನಿಕರನ್ನು ಕೆರಳಿಸಿದ್ದು ಇವರೇ ಕುಡಿಯದಂತ ನೀರನ್ನು ನಾವು ಹೇಗೆ ಕುಡಿಯುವುದು ಎಂದರು. ಬಿಆರ್‌ಕೆ ಅನುದಾನವಿದ್ದರೂ ಪ್ರತ್ಯೇಕ ಕೊಳವೆ ಬಾವಿಯನ್ನು ಕೊರಸದೆ ಪುರಸಭೆಯ ನೀರನ್ನೆ ನಂಬಿಕೊಂಡು ಕೂತಿರುವ ವೈಧ್ಯಾಧಿಕಾರಿ ನಡೆಗೆ ಜಾಗೃತ ಅಧಿಕಾರಿ ಅಸಮಾಧಾನ ಗೊಂಡರು.

ಎಬಿಆರ್ ಕೆ ಯೋಜನೆಯಿಂದ ದಿನಕ್ಕೆ 800 ರೂ.

ಸಾರ್ವಜನಿಕರಿಂದ ಪಡೆದ ದೂರಿನ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ ಜಾಗೃತ ಅಧಿಕಾರಿ ಶ್ರೀನಿವಾಸ್ ರವರು ಸರ್ಕಾರ ಪ್ರತಿ ರೋಗಿಗೆ ದಿನಕ್ಕೆ 800 ರೂಗಳನ್ನು ಚಿಕಿತ್ಸೆಗಾಗಿ ನೀಡುತ್ತದೆ. ಇಲ್ಲಿ ಸಿಗದಂತಹ ಔಷಧಗಳನ್ನು ತರಿಸಿಕೊಡಬೇಕು. ಹಾಗೆಯೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಲಭ್ಯವಿಲ್ಲದ ಚಿಕಿತ್ಸೆಯನ್ನ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಕೂಡ 5 ಲಕ್ಷದವರೆಗೆ ಸರ್ಕಾರವೇ ಹಣ ಬರಿಸಲಿದೆ ವೈದ್ಯರಿಗೆ ಸಂಬಳದ ಜೊತೆಗೆ ಹೆಚ್ಚುವರಿ ಕೆಲಸಕ್ಕೆ ಹೆರಿಗೆ 3-4 ಸಾವಿರ ಹೆಚ್ಚುವರಿ ಭತ್ಯೆಯನ್ನು ವೈದ್ಯರಿಗೆ ನೀಡಲು ಎಬಿಆರ್‌ಕೆ ಅನುದಾನದಲ್ಲಿ ಅವಕಾಶವಿದೆ. ಆದರೆ ಇಲ್ಲಿ ಅಂತಹ ಯಾವುದೇ ಸೌಲಭ್ಯ ರೋಗಿಗಳಿಗೆ ನೀಡಿದಂತೆ ಕಾಣುತ್ತಿಲ್ಲ. ಎ ಬಿ ಆರ್ ಕೆ ಹಾಗೂ ರಾಜ್ಯ ಬಜೆಟ್ ಸೇರಿದಂತೆ ಇತರೆ ಅನುದಾನದಲ್ಲಿ ವಾರ್ಷಿಕವಾಗಿ 40 ರಿಂದ 50 ಲಕ್ಷ ಹಣ ಆಸ್ಪತ್ರೆಗೆ ಸಿಗಲಿದ್ದು ಇದರ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಅಮಾನತ್ತಿಗೆ ಶಿಫಾರಸ್ಸು ಶ್ರೀನಿವಾಸ್

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕನ್ನಡಕ ನೀಡಲು ಹಣ ಪಡೆದು ಮತ್ತೆ ವಾಪಸ್ ಕೊಟ್ಟ ವೈದ್ಯ ಡಾಕ್ಟರ್ ಗಂಗಾಧರ್ ಹಾಗೂ ಹೆರಿಗೆಗಾಗಿ ಹಣ ಪಡೆದ ನರ್ಸ್ ಅನುಸೂಯಮವರಿಂದ ಹಣ ವಾಪಸ್ ಕೊಡಿಸಿದ್ದು ಹಣ ಕೊಟ್ಟವರ ಲಿಖಿತ ದೂರಿನ ಮೇರೆಗೆ ವಿಚಾರಣೆ ನಡೆಸಿ ಸದರಿ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಅಮಾನತ್ತಿಗಾಗಿ ಶಿಫಾರಸ್ಸು ಮಾಡುತ್ತೇವೆ. ಮುಂದೆ ಯಾರು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ ನೀಡಬಾರದು ಅಂತ ಸಮಯ ಬಂದಾಗ ನನ್ನ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ದೂರವಾಣಿಯ ಸಂಖ್ಯೆಯನ್ನು ಚೀಟಿಯಲ್ಲಿ ಬರೆಸಿ ಆಸ್ಪತ್ರೆಯ ಗೋಡೆ ಮೇಲೆ ಅಂಟಿಸಿದರು.

ಸ್ಥಳದಲ್ಲಿ ತಹಶೀಲ್ದರ್ ಸಿಗ್ಬತ್ ವುಲ್ಲಾ, ಪಿಎಸ್ಐ ವಿಜಯ್ ಕುಮಾರ್, ಸಾಮಾಜಿಕ ಹೋರಾಟಗಾರರಾದ ಅಂದ್ರಾಳು ನಾಗಭೂಷಣ್, ಮಧುಗಿರಿ ಮಹೇಶ್, ಸತೀಶ್, ಅರಳಾಪುರ ರಮೇಶ್, ಜಿಲ್ಲಾ ಆರ್ ಸಿ ಎಚ್ ಓ ಮೋಹನ್, ಜಾಗೃತಿ ದಳದ ಸಿಬ್ಬಂದಿಗಳಾದ ರವಿ, ಪರಮೇಶ್ , ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

ಇದನ್ನೂ ಓದಿ: England ವಿರುದ್ಧ ಟೆಸ್ಟ್‌ ; ಮೊದಲ ದಿನ ಭಾರತದ ವನಿತೆಯರ ಅಮೋಘ ಆಟ

Advertisement

Udayavani is now on Telegram. Click here to join our channel and stay updated with the latest news.

Next