Advertisement

ಸಚಿವರಿಂದ ಭತ್ತದ ಯಾತ್ರೀಕೃತ ನಾಟಿ ಪ್ರಾತ್ಯಕ್ಷಿಕೆ ವೀಕ್ಷಣೆ

06:00 AM Aug 21, 2018 | Team Udayavani |

ಕುಂದಾಪುರ: ಹೆಮ್ಮಾಡಿಯ ಸಂತೋಷನಗರದ ಬುಗ್ರಿಕಡುವಿಗೆ ಸೋಮವಾರ ಭೇಟಿ ನೀಡಿದ ರಾಜ್ಯ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರಿಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಉಡುಪಿ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಸಚಿವರು ಭತ್ತದ ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು.
 
ಸಮ್ಮಾನ
ಈ ಸಂದರ್ಭದಲ್ಲಿ 10 ಎಕರೆ ಜಾಗದಲ್ಲಿ ಕೃಷಿ ಮಾಡಿರುವ ರೈತ ಶೀನ ಪೂಜಾರಿ ಅವರನ್ನು ಸಚಿವರು ಸಮ್ಮಾನಿಸಿದರು. 

Advertisement

ಸಚಿವರಿಗೆ ಸಲ್ಲಿಸಿದ ಮನವಿ ಪಟ್ಟಿ ಇಂತಿದೆ
– ಕೃಷಿ ಬೆಳೆಗೆ ಕಾಡು ಪ್ರಾಣಿಗಳ ಹಾವಳಿಯಿದ್ದು, ಅದರ ನಿಯಂತ್ರಣಕ್ಕಾಗಿ ಕೋವಿ ಕಾನೂನು ಸಡಿಲಿಕೆ, ಶೆ. 90ರ ಸಹಾಯಧನದಲ್ಲಿ ಸೋಲಾರ್‌ ಐಬೆಕ್ಸ್‌ ತಂತಿ ಬೇಲಿ ಒದಗಿಸಿ. 
–   ಕರಾವಳಿಯ ರೈತರನ್ನು ಗಮನದಲ್ಲಿಟ್ಟು ಕೊಂಡು ರಾಜ್ಯ ಸರಕಾರ ಬೆಂಬಲ ಬೆಲೆಯನ್ನು ಅಕ್ಟೋಬರ್‌- ನವೆಂಬರ್‌ನಲ್ಲಿ ಘೋಷಿಸಬೇಕು. 
–  ಕೃಷಿ ಇಲಾಖೆಯಲ್ಲಿ ಸಿಬಂದಿ ಕೊರತೆಯಿಂದ ಸೌಲಭ್ಯ ಪಡೆಯುವಲ್ಲಿ ವಿಳಂಬ.
–  ಜಿಲ್ಲೆಯಲ್ಲಿ ಕೃಷಿಗೆ ಕೂಲಿಯಾಳುಗಳ ಸಮಸ್ಯೆಯಿದ್ದು, ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಪ್ರೋತ್ಸಾಹಿಸಲು ಕಂಬೈನಡ್‌ ಹಾರ್ವೆಸ್ಟರ್‌ ಮೂಲಕ ಕಟಾವು ಮಾಡಿದ ರೈತರಿಗೆ ಎಕರೆವಾರು ಪ್ರೋತ್ಸಾಹಧನ ಸರಕಾರ ನೀಡಬೇಕು. 

ಇದಲ್ಲದೆ ಸೇರಿದ್ದ ರೈತರ ಪರ ಪ್ರಭಾಕರ ಶೆಟ್ಟಿ ಅವರು, ನೆಲಗಡಲೆಗೆ ಪ್ರೋತ್ಸಾಹಧನ, ಕೃಷಿಕರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್‌ ನೀಡಲಿ ಎಂದರು. 

ಇಲಾಖೆಯಿಂದ ಸಿಗುವ ಸವಲತ್ತುಗಳು ರೈತರಿಗೆ ಸುಲಭವಾಗಿ ಸಿಗುವಂತೆ, ಇರುವ ವ್ಯವಸ್ಥೆಯನ್ನು ಸರಳ ಮಾಡುವಂತೆ ಕೃಷಿಕರಾದ ಡಾ| ಅತುಲ್‌ ಹೇಳಿದರು. 

ಎಪಿಎಂಸಿ ಅಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ ಈ ಭಾಗದಲ್ಲಿ ಕೃಷಿ ನೀರಿಗೆ ಉಪ್ಪು ನೀರಿನ ಸಮಸ್ಯೆಯಾಗುತ್ತಿದ್ದು, ಹೊಳೆ ದಂಡೆಗೆ ಬದುಗಳನ್ನು ನಿರ್ಮಿಸಿದರೆ ಅನುಕೂಲವಾಗಲಿದೆ. ಗದ್ದೆಗಳಿಗೆ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಯಂತ್ರೀಕೃತ ಕೃಷಿಗೆ ತೊಂದರೆಯಾಗುತ್ತಿದೆ ಎಂದರು. 

Advertisement

ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎ. ಅಶೋಕ್‌ ಕುಮಾರ್‌ ಕೊಡ್ಗಿ ಸಚಿವರಿಗೆ ಮನವಿ ಸಲ್ಲಿಸಿದರು. ತಾಲೂಕು ಎಪಿಎಂಸಿ ಅಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ,  ಕೃಷಿ ಇಲಾಖೆಯ ಅಧಿಕಾರಿಗಳು, ನೂರಾರು ಮಂದಿ ರೈತರು ಉಪಸ್ಥಿತರಿದ್ದರು.  

ಕೋವಿ ಕಾನೂನು ಸಡಿಲಿಕೆಗೆ ಪ್ರಯತ್ನ
ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವರು ಕೋವಿ ಕಾನೂನು ಸಡಿಲಿಕೆ ಅಧಿಕಾರ ಡಿಸಿಯವರಿಗೆ ಮಾತ್ರವಿದ್ದು, ಅವರೊಂದಿಗೆ ಮಾತನಾಡಿ, ಸಡಿಲಿಕೆಗೆ ಪ್ರಯತ್ನ ಮಾಡಲಾಗುವುದು. ಉಪ್ಪು ನೀರಿನ ಸಮಸ್ಯೆಗೆ ಪರಿಹಾರವಾಗಿ ಹೊಳೆ ದಂಡೆಗೆ ಏರಿಸುವ ಸಂಬಂಧ ನೀರಾವರಿ ಸಚಿವರೊಂದಿಗೆ ಮಾತನಾಡಲಾಗುವುದು ಎಂದ ಅವರು, ತಾಲೂಕು ಮಟ್ಟದಲ್ಲಿ ಕೃಷಿ ಯಂತ್ರ ದುರಸ್ತಿಗೆ ಸಿಬಂದಿ ನೇಮಿಸಲಾಗುವುದು ಎಂದು ಸಚಿವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next