Advertisement

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

04:42 PM Apr 17, 2024 | Team Udayavani |

ಮಹಾನಗರ:ಸ್ವಚ್ಛತೆ ಎನ್ನುವುದು ಮಂಗಳೂರು ನಗರ ಭಾಗದಲ್ಲಿ ಮಾತ್ರವಲ್ಲ, ಹೊರವಲಯದ ಗ್ರಾಮೀಣ ಭಾಗದಲ್ಲೂ
ಸ್ಥಳೀಯಾಡಳಿತಗಳಿಗೆ ಸವಾಲಾಗಿದೆ. ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿ ಬದಿ, ಮುಖ್ಯ ರಸ್ತೆ-ಒಳರಸ್ತೆಗಳ ಬದಿಯಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ನಗರದಿಂದ ಹೊರಗೆ ಗ್ರಾಮೀಣ ಪ್ರದೇಶದತ್ತ ಸಾಗಿದರೆ ಬಹುತೇಕ ರಸ್ತೆ ಬದಿಯಲ್ಲಿ ಉದ್ದಕ್ಕೂ ಪ್ಲಾಸ್ಟಿಕ್‌ ಪೊಟ್ಟಣಗಳಲ್ಲಿ ಕಟ್ಟಿ ಎಸೆಯುವುದು ಕಂಡು ಬರುತ್ತಿದೆ. ಇದರಿಂದ ಸ್ಥಳದಲ್ಲಿ ಅಸಹ್ಯ ವಾತಾವರಣದ ಮಾತ್ರವಲ್ಲದೆ, ರಸ್ತೆ ಯಲ್ಲಿ ಸಾಗುವವರಿಗೆ ವಾಸನೆ ಬರುತ್ತಿದೆ. ರೋಗ ಹರಡುವ ತಾಣಗಳಾಗಿಯೂ ಇವು ಮಾರ್ಪಾಡಾಗುತ್ತಿವೆ.

Advertisement

ಕೆಲವು ಕಡೆಗಳಲ್ಲಿ “ಕಸ ಎಸೆಯ ಬಾರದು’ ಎಂದು ಸೂಚನ ಫ‌ಲಕ ಅಳವಡಿಸಿದರೂ ಪ್ರಯೋಜನ ವಾಗುವುದಿಲ್ಲ. ನಗರದ ಹೊರವಲ ಯದ ಗುರುಪುರ, ಮೂಡುಶೆಡ್ಡೆ, ಅಡ್ಯಾರು ಮೊದಲಾದ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ದಂಡ ವಿಧಿಸಿರುವ ಉದಾಹರಣೆಗಳೂ ಇವೆ. ಆದರೆ ಇದರಿಂದ ತ್ಯಾಜ್ಯ ಬೀಳುವುದು ನಿಂತಿಲ್ಲ. ಕೆಮರಾ ಅಳವಡಿಸಿದರೆ ಆ ಸ್ಥಳವನ್ನು ಬಿಟ್ಟು ಇನ್ನೊಂದು ಸ್ಥಳದಲ್ಲಿ ಎಸೆಯುತ್ತಾರೆ!

ಪ್ರಸ್ತುತ ಗ್ರಾಮೀಣ ಭಾಗದ ಎಲ್ಲ ಪಂಚಾಯತ್‌ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದೆ. ಕೆಲವು ಪಂಚಾಯತ್‌ ಹಸಿ – ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿದರೆ, ಕೆಲವು ಪಂಚಾಯತ್‌ ಗಳು ಒಟ್ಟಾಗಿ ಸಂಗ್ರಹಿಸಿ ವಿಲೇವಾರಿ ಮಾಡುತ್ತವೆ. ತ್ಯಾಜ್ಯವನ್ನು ನೇರವಾಗಿ ಮಹಾನಗರ ಪಾಲಿಕೆಯ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಲವು ಪಂಚಾಯತ್‌ಗಳು ಸಾಗಿಸುತ್ತವೆ. ಸ್ವಂತ ಘಟಕಗಳನ್ನು ಹೊಂದಿರುವ ಪಂಚಾಯತ್‌ಗಳು ಇವೆ.

ಜಿಲ್ಲೆಯಲ್ಲಿ 141 ಗ್ರಾ.ಪಂ.ಗಳು ಹೊಸ ಪೂರ್ಣ ಪ್ರಮಾಣದ ಘನತ್ಯಾಜ್ಯ ಘಟಕಗಳನ್ನು ಹೊಂದಿವೆ. 18 ಬಹುಗ್ರಾಮ ಮಾದರಿಯಲ್ಲಿ ಘಟಕಗಳಿವೆ. 48 ಗ್ರಾ.ಪಂ.ಗಳಲ್ಲಿ ಹಳೆ ಕಟ್ಟಡ, 16 ತಾತ್ಕಾಲಿಕ ಕಟ್ಟಡದಲ್ಲಿ ಘಟಕಗಳು ಕಾರ್ಯಾಚರಿಸುತ್ತಿವೆ. ಗ್ರಾಮ ಮಟ್ಟದಲ್ಲಿ ಹಸಿ ಕಸ ಶೇ.90ರಷ್ಟು ಮನೆಯಲ್ಲೇ ವಿಲೇವಾರಿಯಾಗುತ್ತದೆ. ಒಣ ಹಸ ಮಾತ್ರ ಹೆಚ್ಚು ಸಂಗ್ರಹ ವಾಗುತ್ತದೆ. ಎಂಆರ್‌ಎಫ್‌ ಕೇಂದ್ರ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದರೆ ತ್ಯಾಜ್ಯ ಬೀಳುವುದು ಸ್ಥಗಿತಗೊಳ್ಳಲಿದೆ ಎನ್ನುವುದು ಅಧಿಕಾರಿಗಳ ಮಾತು.

ಎಂಆರ್‌ಎಫ್‌ ಘಟಕ
ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸಮಗ್ರ ಘನ ತ್ಯಾಜ್ಯ,ನಿರ್ವಹಣ ಕೇಂದ್ರ (ಮೆಟೀರಿಯಲ್‌.ರಿಕವರಿ ಫೆಸಿಲಿಟಿ – ಎಂಆರ್‌ಎಫ್‌).ಘಟಕಗಳು ಜಿಲ್ಲೆಯ ವಿವಿಧ ತಾಲೂಕು. ಗಳಲ್ಲಿ ನಿರ್ಮಾಣವಾಗುತ್ತಿವೆ.
ತೆಂಕ ಎಡಪದವಿನಲ್ಲಿ ಈಗಾಗಲೇ ನಿರ್ಮಾಣ ವಾಗಿರುವ ಘಟಕದಲ್ಲಿ ಮಂಗಳೂರು, ಮೂಡುಬಿದಿರೆ, ಮೂಲ್ಕಿ, ಬಂಟ್ವಾಳ ತಾಲೂಕಿನ ಕೆಲವು ಗ್ರಾ.ಪಂ.ಗಳು ಸಹಿತ ಒಟ್ಟು 51 ಗ್ರಾಮ ಪಂಚಾಯತ್‌ಗಳ ತ್ಯಾಜ್ಯವನ್ನು ಇಲ್ಲಿ ಸಂಸ್ಕರಿಸಲಾಗುತ್ತಿದೆ. ಕೆಲವು ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಂಗಡನೆ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ತ್ಯಾಜ್ಯ ಬರುತ್ತಿಲ್ಲ.

Advertisement

ತ್ಯಾಜ್ಯ ವಿಲೇವಾರಿಗೆ ಆದ್ಯತೆ
ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಗ್ರಾಪಂಗಳಲ್ಲಿ ಜಾರಿಯಲ್ಲಿ. ಎಂಆರ್‌ಎಫ್‌ ಘಟಕಗಳ ಮೂಲಕವೂ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆಯನ್ನೂ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸುವ ಕೆಲಸವೂ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ. ಜನರು ಕೂಡ ಪರಿಸರ ಕಾಳಜಿಯನ್ನು ಹೊಂದುವ ಮೂಲಕ ಸುತ್ತಮುತ್ತಲಿನ ಪರಿಸರ ಸಂರಕ್ಷಿಸುವ ಕೆಲಸವನ್ನೂ ಮಾಡಬೇಕು.
*ಡಾ| ಆನಂದ್‌ ಕೆ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next