Advertisement

ರಾಷ್ಟ್ರೀಯ ಹೆದಾರಿಯಲ್ಲೇ ಹೊಂಡಗಳ ದರ್ಶನ !

10:41 AM Jun 14, 2018 | |

ಮಹಾನಗರ: ನಗರದ ಮೂಲಕ ಹಾದು ಹೋಗುವ 2 ರಾಷ್ಟ್ರೀಯ ಹೆದ್ದಾರಿಗಳಾದ ಪಣಂಬೂರಿನಿಂದ ಪಡೀಲ್‌ (66, 75) ವರೆಗಿನ ರಸ್ತೆಯು ಹೆಸರಿಗಷ್ಟೇ ಹೆದ್ದಾರಿ. ಆದರೆ, ಮಳೆಗಾಲದ ಆರಂಭದಲ್ಲೇ ಇಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಹೊಂಡ- ಗುಂಡಿಗಳ ಸಮಸ್ಯೆ, ಸರ್ವಿಸ್‌ ರಸ್ತೆಗಳ ಅವ್ಯವಸ್ಥೆ, ಹೆದ್ದಾರಿಯುದ್ದಕ್ಕೂ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ರಸ್ತೆ ಬದಿಯೇ ಹರಿಯುವ ಮಳೆ ನೀರು… ಹೀಗೆ ಇಲ್ಲಿ ಎಲ್ಲವೂ ಸಮಸ್ಯೆ. ಹೆದ್ದಾರಿಗಳು ಚೆನ್ನಾಗಿದೆ ಎಂದು ವೇಗವಾಗಿ ವಾಹನದಲ್ಲಿ ಚಲಿಸಿದರೆ ತತ್‌ಕ್ಷಣ ಬೃಹತ್‌ ಹೊಂಡ ಎದುರಾಗುತ್ತದೆ. ಜತೆಗೆ, ಅಪಾಯ- ಅಪಘಾತವೂ
ಉಂಟಾಗಬಹುದು.

Advertisement

ಪಣಂಬೂರು, ಕೂಳೂರು, ಬಂಗ್ರಕೂಳೂರು, ಕೋಡಿಕಲ್‌ ಕ್ರಾಸ್‌, ಕೊಟ್ಟಾರ ಚೌಕಿ, ಕೆಪಿಟಿ, ನಂತೂರು, ಬಿಕರ್ನಕಟ್ಟೆ, ಪಡೀಲ್‌ ಹೀಗೆ ಎಲ್ಲ ಕಡೆಗಳಲ್ಲೂ ಹೊಂಡಗಳು ರಾರಾಜಿಸುತ್ತಿವೆ. ಮಳೆ ಬಂದರೆ ಪೂರ್ತಿ ನೀರು ಹೆದ್ದಾರಿಯಲ್ಲಿರುತ್ತದೆ.

ಶಾಶ್ವತ ಪರಿಹಾರವಾಗಿಲ್ಲ
ನಂತೂರು ವೃತ್ತದ ಅವ್ಯವಸ್ಥೆಯಿಂದಾಗಿ ಹಲವಾರು ಜೀವ- ಹಾನಿ ಈಗಾಗಲೇ ಸಂಭವಿಸಿದ್ದು, ಇಲ್ಲಿ ರಸ್ತೆ ದಾಟುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗವ ಪರಿಸ್ಥಿತಿ ಇತ್ತು. ಬಳಿಕ ವೃತ್ತದ ಗಾತ್ರವನ್ನು ಕಡಿಮೆಗೊಳಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಅಂಡರ್‌ ಪಾಸ್‌, ಓವರ್‌ ಪಾಸ್‌ ನಿರ್ಮಿಸುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಯಾರು ಕೂಡ ಗಂಭೀರ ಪ್ರಯತ್ನ ನಡೆಸುವಂತೆ ಕಾಣುತ್ತಿಲ್ಲ. ಇಲ್ಲಿನ ಅವ್ಯವಸ್ಥೆಯಿಂದಾಗಿ ಮಂಗಳವಾರ ಕೂಡ ಇಲ್ಲಿ ರಸ್ತೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ದಂಪತಿ ಮೃತಪಟ್ಟಿದ್ದಾರೆ.

ಪಡೀಲ್‌ ಅವ್ಯವಸ್ಥೆ
ಬಿಕರ್ನಕಟ್ಟೆಯಿಂದ ಪಡೀಲ್‌ಗೆ ಹೋಗುವ ರಸ್ತೆಯಲ್ಲಿ ಇದ್ದ ಬೃಹದಾಕಾರದ ಹೊಂಡಕ್ಕೆ ಕಾಟಾಚಾರದ ರೀತಿಯಲ್ಲಿ ತೇಪೆ ಹಾಕಲಾಗಿದೆ. ಜತೆಗೆ ರೈಲ್ವೇ ಮೇಲ್ಸೆತುವೆ ಬಳಿ ರಸ್ತೆಯ ಒಂದು ಬದಿ ಪೂರ್ತಿ ಹಾಳಾಗಿದೆ. ಈಗ ಸೇತುವೆ ಒಂದು ಬದಿಯ ಕಾಮಗಾರಿ ನಡೆಯುತ್ತಿರುವುದರಿಂದ ಒಂದೇ ಸೇತುವೆಯ ಕೆಳಗಡೆ ಎರಡೂ ಬದಿಯ ವಾಹನ ಸಂಚರಿಸುತ್ತಿದೆ. ಅದು ಎರಡು ರಸ್ತೆಗಳಿಗೆ ಡಿವೈಡ್‌ ಆಗುವಲ್ಲಿ ಕಾಂಕ್ರೀಟ್‌ ಹಾಕಲಾಗಿದ್ದು, ಅದು ಅಪಾಯಕಾರಿ ಸ್ಥಿತಿಯಲ್ಲಿದೆ. ಜತೆಗೆ ಒಂದು ಒಳರಸ್ತೆಗೆ ಮೋರಿಯೇ ಅಳವಡಿಸದೇ ಇರುವುದರಿಂದ ನೀರೆಲ್ಲ ರಸ್ತೆಯಲ್ಲೇ ಹರಿದು ಹೋಗುತ್ತಿದೆ.

ಕೋಡಿಕಲ್‌ ಕ್ರಾಸ್‌: ನೀರು
ಕೊಟ್ಟಾರಚೌಕಿಯ ಕೋಡಿಕಲ್‌ ಕ್ರಾಸ್‌ ಬಳಿ ಫ್ಲೈ ಓವರ್‌ನ ಕೊನೆಯಲ್ಲಿ ನೀರು ನಿಂತಿದ್ದು, ಮಳೆ ನಿಂತರೂ ನೀರು ಹಾಗೇ ಇದೆ. ಕೋಡಿಕಲ್‌ ಕ್ರಾಸ್‌ನಲ್ಲಿ ವಾಹನ ಸಂಚಾರದ ಕುರಿತ ಗೊಂದಲಗಳು ಇನ್ನೂ ನಿವಾರಣೆಯಾಗಿಲ್ಲ. ಹೆದ್ದಾರಿ ಪೂರ್ತಿ ಹದಗೆಟ್ಟಿದ್ದರೆ ವಾಹನ ಚಾಲಕರು ನಿಧಾನವಾಗಿ ವಾಹನ ಚಲಾಯಿಸುತ್ತಾರೆ. ಆದರೆ ಇಲ್ಲಿ ರಸ್ತೆ ಚೆನ್ನಾಗಿದ್ದು, ಅಲ್ಲಲ್ಲಿ ಹೊಂಡಗಳು ಎದುರಾದಾಗ ತತ್‌ ಕ್ಷಣ ಬ್ರೇಕ್‌ ಹಾಕಬೇಕಾಗುತ್ತದೆ. ಇಂತಹ ಸಂದರ್ಭ ವಾಹನಗಳ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.

Advertisement

ಕೆಪಿಟಿ: ಹೆದ್ದಾರಿಗೆ ಮಣ್ಣು
ಕೆಪಿಟಿಯಿಂದ ಕೊಟ್ಟಾರ ಕಡೆಗೆ ಸಾಗುವ ರಸ್ತೆ ಸಹಿತ ಕೆಲವು ಭಾಗದ ಹೆದ್ದಾರಿ ಬದಿಯ ಮಣ್ಣು ಮಳೆ ನೀರಿನಲ್ಲಿ ಹರಿದು ಹೆದ್ದಾರಿ ಬದಿಯಲ್ಲಿ ದೊಡ್ಡ ದೊಡ್ಡ ಹೊಂಡಗಳೇ ನಿರ್ಮಾಣವಾಗಿದೆ. ಇಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮನೆಗಳಿವೆ. ಆ ಕಡೆಗೆ ತೆರಳುವ ಸಾರ್ವಜನಿಕರು ಈ ಹೊಂಡಗಳನ್ನು ದಾಟಿಯೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹದಗೆಟ್ಟ ಸರ್ವೀಸ್‌ ರಸ್ತೆ 
ಪಣಂಬೂರು ಪ್ರದೇಶದಲ್ಲಿ ಹೆದ್ದಾರಿ ಬಳಿಯ ಸರ್ವಿಸ್‌ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೃಹತ್‌ ಲಾರಿಗಳು ಸಹಿತ ಕಂಟೈನರ್‌ಗಳು ಈ ಭಾಗದಲ್ಲಿ ಹೆಚ್ಚಾಗಿ ಸಂಚರಿಸುವುದರಿಂದ ಈ ಅವ್ಯವಸ್ಥೆ ಉಂಟಾಗಿದೆ. ಜತೆಗೆ ರಸ್ತೆಯ ಬದಿಯಲ್ಲಿಯೂ ಹೊಂಡಗಳು ನಿರ್ಮಾಣಗೊಂಡಿದ್ದು, ಅದರಲ್ಲಿ ಮಳೆನೀರು ತುಂಬಿಕೊಂಡಿದೆ. ಜತೆಗೆ ಹೆದ್ದಾರಿಯ ಫ‌ುಟ್‌ಪಾತ್‌ಗಳ ಹೊಂಡದಿಂದಾಗಿ ಪಾದಚಾರಿಗಳಿಗೆ ನಡೆದಾಡುವುದು ಕೂಡ ಕಷ್ಟವಾಗಿದೆ. ಪಣಂಬೂರಿನಲ್ಲಿ ಹೆದ್ದಾರಿಯ ಹೊಂಡಗಳ ಸಂಖ್ಯೆಯೂ ಹೆಚ್ಚಿದೆ. 

‌ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ
ಮಳೆಗಾಲ ಆರಂಭಕ್ಕೂ ಮುನ್ನವೇ ಮುಂದೆ ಎದುರಾಗುವ ಸಮಸ್ಯೆಗಳನ್ನು ಹತೋಟಿಗೆ ತರಲು ಎಲ್ಲ ತಯಾರಿ ಇಲಾಖೆ ನಡೆಸಿದ್ದರೆ ಹೆದ್ದಾರಿ ಪ್ರಾಧಿಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡತ್ತಿಲ್ಲ. ಬಹುತೇಕ ಭಾಗಗಳಲ್ಲಿ ರಸ್ತೆ ಬದಿಯ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗಿದೆ. ಕೆಲವೆಡೆ ರಸ್ತೆಗಳಲ್ಲೇ ಗುಂಡಿಗಳು ನಿರ್ಮಾಣವಾಗಿದೆ.
 - ಅಶೋಕ್‌ ಸುಬ್ಬಯ್ಯ, ಸ್ಥಳೀಯರು

ದ್ವಿಚಕ್ರ ಚಾಲನೆ ಅಪಾಯ
ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ತೆರಳುವುದಕ್ಕೇ ಆತಂಕವಾಗುತ್ತಿದೆ. ವೇಗವಾಗಿ ಹೋಗುವ ವೇಳೆ ತತ್‌ ಕ್ಷಣಕ್ಕೆ ಹೊಂಡ ಎದುರಾದರೆ ಏನೂ ಮಾಡುವಂತಿಲ್ಲ. ಬ್ರೇಕ್‌ ಹಾಕಿದರೆ ಸ್ಕಿಡ್‌ ಗ್ಯಾರಂಟಿ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ.
– ಸುಧೀರ್‌ ಸಾಲ್ಯಾನ್‌, ಜೆಪ್ಪು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next