ಶ್ರೀಮಂತ ಮನೆತನದ ವಿದ್ಯಾರ್ಥಿಗಳು ದಾರಿ ತಪ್ಪಲು ಕಾರಣ ಅವರ ಪಾಲಕರಾ? ಮಕ್ಕಳ ಮೇಲಿನ ಅತಿಯಾದ ಪ್ರೀತಿ ಹಾಗೂ ಐಷಾರಾಮಿ ಬದುಕು ವಿದ್ಯಾರ್ಥಿಗಳ ಕಾಲೇಜು ಜೀವನಕ್ಕೆ ಮಾರಕವಾಗುತ್ತಾ? ಇಂತಹ ಅಂಶಗಳನ್ನಿಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’.
ಆಗಾಗ ಕೇಳಿಬರುವ ಗಾಂಜಾ, ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಹಾಗಂತ ಇಡೀ ಸಿನಿಮಾದಲ್ಲಿ ಅದನ್ನೇ ಹೇಳಿಲ್ಲ. ಅದರಾಚೆ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಹೇಳಲು ಪ್ರಯತ್ನಿಸಲಾಗಿದೆ. ಚಿತ್ರದ ಟೈಟಲ್‌ಗೆ ತಕ್ಕಂತೆ ಇಡೀ ಸಿನಿಮಾ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುತ್ತದೆ. ಇಲ್ಲೊಂದು ಗ್ಯಾಂಗ್ ಇದೆ. ಪಕ್ಕಾ ಪರೋಡಿ ಗ್ಯಾಂಗ್ ಅದು. ಅದಕ್ಕೆ ತಕ್ಕಂತೆ ಶ್ರೀಮಂತ ಕುಟುಂಬದ ಹಿನ್ನೆಲೆ ಬೇರೆ. ಅದು ಅವರ ಆಟವನ್ನು ಮತ್ತಷ್ಟು ತೀವ್ರವಾಗಿಸುತ್ತದೆ. ಈ ನಡುವೆಯೇ ನಡೆಯುವ ಗಂಭೀರ ಘಟನೆಯೊಂದು ಇಡೀ ಕಥೆಗೆ ಹೊಸ ತಿರುವು ಕೊಡುತ್ತದೆ. ಅದೇನು ಎಂಬುದನ್ನು ನೋಡುವ ಕುತೂಹಲವಿದ್ದರೆ ಸಿನಿಮಾ ನೋಡಬಹುದು.
ಎಲ್ಲಾ ಸಿನಿಮಾಗಳಂತೆ ಇಲ್ಲೂ ನಿರ್ದೇಶಕರು ಮೊದಲರ್ಧ ಕಾಲೇಜು ಹುಡುಗ -ಹುಡುಗಿಯರ ತರ್ಲೆ, ತುಂಟಾಟವನ್ನು ತೋರಿಸುತ್ತಾ, ಮಧ್ಯಂತರದ ಹೊತ್ತಿಗೆ ಕಥೆಗೆ “ಬೆಳಕು’ ಚೆಲ್ಲಿದ್ದಾರೆ. ಅಲ್ಲಿಂದ ಇಡೀ ಸಿನಿಮಾ ಹೊಸ ತಿರುವು ಪಡೆದುಕೊಂಡು ಸಾಗುತ್ತದೆ. ನಿಜವಾದ “ಗೇಮ್’ ಆರಂಭವಾಗಿ, ಟ್ವಿಸ್ಟ್‌ಗಳೊಂದಿಗೆ ಸಿನಿಮಾ ಪಯಣಿಸುತ್ತದೆ. ಇಲ್ಲೊಂದು ಆಶಯವಿದೆ, ಜೊತೆಗೊಂದು ಸಂದೇಶವೂ ಇದೆ. ಇಡೀ ಚಿತ್ರವನ್ನು ಕೆಲವೇ ಕೆಲವು ಪಾತ್ರಗಳ ಮೂಲಕ ಕಟ್ಟಿಕೊಡಲಾಗಿದೆ. ಇದೊಂದು ಕಾಲೇಜು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆಯಾದ್ದರಿಂದ ನಿರ್ದೇಶಕರು ಅನಾವಶ್ಯಕ ಬಿಲ್ಡಪ್ ಗಳಿಂದ ಸಿನಿಮಾವನ್ನು ಮುಕ್ತವಾಗಿಸಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಚಂದನ್ ಶೆಟ್ಟಿ, ಭಾವನಾ ಅಪ್ಪು, ಅಮರ್, ಮನಸ್ವಿ, ವಿವಾನ್ ಪಾತ್ರಕ್ಕೆ ನ್ಯಾಯ ಒದಗಿಸಿ ದ್ದಾರೆ. ಉಳಿದಂತೆ ಚಿತ್ರದಲ್ಲಿ ಸುನಿಲ್ ಪುರಾಣಿಕ್, ಭವ್ಯ, ಅರವಿಂದ ರಾವ್, ಪ್ರಶಾಂತ್ ಸಂಬರಗಿ, ಸಿಂಚನಾ, ರಘು ರಾಮನಕೊಪ್ಪ, ಕಾಕ್ರೋಚ್ ಸುಧಿ ನಟಿಸಿದ್ದಾರೆ. ಚಿತ್ರದಲ್ಲಿ ಆಗಾಗ ಬರುವ ಕಲರ್‌ಫುಲ್ ಹಾಡುಗಳು ಇಷ್ಟವಾಗುತ್ತವೆ.
ರವಿಪ್ರಕಾಶ್ ರೈ