Advertisement

46 ಸಾವಿರ ನೇಕಾರರ ಕುಟುಂಬದ ಮಕ್ಕಳಿಗೆ ವಿದ್ಯಾನಿಧಿ ಯೋಜನೆ: ಸಿಎಂ ಬೊಮ್ಮಾಯಿ

02:08 PM Dec 16, 2022 | Team Udayavani |

 

Advertisement

ಬೆಂಗಳೂರು : ನೇಕಾರರ ಮಕ್ಕಳ ವಿದ್ಯಾನಿಧಿ ಯೋಜನೆಗೆ 46 ಸಾವಿರ ನೇಕಾರ ಕುಟುಂಬಗಳ ವಿದ್ಯಾರ್ಥಿಗಳಿಗೆ ಗುರುತಿಸಲಾಗಿದ್ದು, ಶೀಘ್ರವಾಗಿ ವಿದ್ಯಾನಿಧಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಡಿಬಿಟಿ ಮೂಲಕ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದರು. 46 ಸಾವಿರ ನೇಕಾರ ಕುಟುಂಬದ ವಿದ್ಯಾರ್ಥಿಗಳ ದಾಖಲೆಗಳನ್ನು ಹದಿನೈದು ದಿನದೊಳಗೆ ಪಡೆದು ಪಟ್ಟಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು, ವಿದ್ಯಾರ್ಥಿಗಳಿಗೆ ಕೂಡಲೇ ವಿದ್ಯಾನಿಧಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಮಕ್ಕಳಿಂದ ಯಾವುದೇ ರೀತಿಯ ಅರ್ಜಿಯನ್ನು ಪಡೆಯುವುದಲ್ಲ. ವಿದ್ಯಾನಿಧಿ ಮಕ್ಕಳ ಹಕ್ಕು ಎಂದು ತಿಳಿಸಿದರು.

ನೇಕಾರರಿಗೆ ಕಾಯಕ ಯೋಜನೆ
ನೇಕಾರರ ಕಸುಬನ್ನು ಉನ್ನತೀಕರಿಸಿ ಉಳಿಸುವುದು ಬಹಳ ಮುಖ್ಯ. ಬಹಳ ಗಂಟೆಗಳ ಕಾಲ ಹತ್ತಿಯ ಮಧ್ಯೆಯೆ ಕೆಲಸ ಮಾಡಬೇಕಾಗುವುದರಿಂದ ನೇಕಾರರಿಗೆ ಅಸ್ತಮಾ, ಟಿಬಿಯಂತಹ ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ಕೈಮಗ್ಗ ನೇಕಾರರ ಕಾಳಜಿ ವಹಿಸಲು ನೇಕಾರ ಸಮ್ಮಾನ್ ಯೋಜನೆ ಯಡಿ 2000 ರೂ.ಗಳ ಆರ್ಥಿಕ ನೆರವನ್ನು 5000 ರೂ.ಗಳಿಗೆ ಹೆಚ್ಚಿಸಲಾಗಿದೆ. ಅವರ ಹತ್ತು ಹಲವಾರು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ನಾಳೆ ವಿದ್ಯುತ್ಛಕ್ತಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಲಾಗುತ್ತಿದೆ. ಕೈಮಗ್ಗ ನೇಕಾರರಿಗೆ ಸಾಲ ಹಾಗೂ ಬಡ್ಡಿಮನ್ನಾ ಯೋಜನೆಗಳನ್ನು ಜಾರಿಯಲ್ಲಿವೆ. ನೇಕಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಕಾಯಕ ಯೋಜನೆಯಡಿ ಪ್ರತಿ ಕುಶಲಕರ್ಮಿಗೆ 50 ಸಾವಿರ ವರೆಗೆ ಧನಸಹಾಯ ನೀಡಲಾಗುತ್ತಿದೆ ಎಂದರು.

46,864 ನೇಕಾರರಿಗೆ ಧನಸಹಾಯ
ನೇಕಾರ ಸಮ್ಮಾನ್ ಯೋಜನೆಯಡಿ 46,864 ಫಲಾನುಭವಿಗಳಿಗೆ 5000 ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಒಟ್ಟು 23.43 ಕೋಟಿ ರೂ.ಗಳು ನೇರವಾಗಿ ನೇಕಾರರ ಬ್ಯಾಂಕ್ ಖಾತೆಗೆ ವರ್ಗಾವಣೆಗೆ ಇಂದು ಚಾಲನೆ ನೀಡಲಾಗಿದೆ ಎಂದರು.

Advertisement

ಜವಳಿ ಉದ್ಯಮಕ್ಕೆ ನೇಕಾರರ ಮಹತ್ವದ ಕೊಡುಗೆ
ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡಿದ್ದು ನೇಕಾರ ವೃತ್ತಿ. ಸ್ವಾತಂತ್ರ್ಯ ಹೋರಾಟವನ್ನು ಗಟ್ಟಿಗೊಳಿಸಿದ್ದು ನೇಕಾರರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ಉಡುಪುಗಳನ್ನೇ ಧರಿಸಬೇಕೆಂಬ ಗುರಿ ಸಾಧಿಸಲು ನೇಕಾರರು ಮಹತ್ವದ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ದೊರೆತ ನಂತರ ಜವಳಿ ಉದ್ಯಮ ಬೆಳೆದಿರದಿದ್ದ ಸಂದರ್ಭದಲ್ಲಿ ದೇಶದಲ್ಲಿ ನೇಕಾರರ ಕೊಡುಗೆ ಮಹತ್ತರವಾದ ಸ್ಥಾನಮಾನವಿದೆ. ನೇಕಾರಿಕೆ ಎಂಬುದು ಕಲಾಕೌಶಲ್ಯವನ್ನೊಳಗೊಂಡ ವೃತ್ತಿ. ವಂಶಪಾರಂಪರ್ಯವಾಗಿ ಬಂದ ಕರಕುಶಲ ಕಲೆಯನ್ನು ಇಂದಿಗೂ ಪೋಷಿಸಿಕೊಂಡು ಬಂದಿದ್ದಾರೆ. ಈಗ ತಂತ್ರಜ್ಞಾನವನ್ನು ಬಳಸಿಕೊಂಡು ಅದ್ಭುತವಾದ ಕೌಶಲ್ಯವನ್ನು ತಮ್ಮ ವೃತ್ತಿಯಲ್ಲಿ ಪ್ರದರ್ಶಿಸುತ್ತಾರೆ. ತಂತ್ರಜ್ಞಾನ ಬದಲಾವಣೆಯಿಂದ ಜವಳಿ ಉದ್ಯಮೂ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ ಎಂದರು.

ಈ ಸಂದರ್ಭದಲ್ಲಿ ಸಕ್ಕರೆ ಜವಳಿ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕಿ ಪೂರ್ಣಿಮಾ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next