Advertisement

ಜಿಲ್ಲೆಯಲ್ಲಿ ಮಕ್ಕಳ ನಿರಂತರ ಕಲಿಕೆಗೆ “ವಿದ್ಯಾಗಮ’

09:39 PM Aug 10, 2020 | mahesh |

ಉಡುಪಿ: ಮಗುವಿನ ಭವಿಷ್ಯದ ಕನಸಿಗೆ ಯಾವುದೇ ನೈಸರ್ಗಿಕ ವಿಕೋಪ, ಮಹಾಮಾರಿ ರೋಗಗಳ ರೀತಿಯ ಅಡಚಣೆಗಳು ಅಡ್ಡಿಯಾಗದಂತೆ ನನಸಾಗಿಸುವ ದೂರದೃಷ್ಟಿಯೊಂದಿಗೆ ಶಿಕ್ಷಣ ಇಲಾಖೆ “ವಿದ್ಯಾಗಮ’ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ.

Advertisement

ಕೋವಿಡ್‌-19 ಪರಿಣಾಮದ ಬದಲಾದ ಸನ್ನಿವೇಶದಲ್ಲಿ “ವಿದ್ಯಾಗಮ’ ಕಾರ್ಯಕ್ರಮ ಶಿಕ್ಷಣ ಲೋಕದಲ್ಲಿ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ನೈತಿಕ ಸ್ಥೈರ್ಯ, ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುವುದರ ಜತೆಗೆ ಮಕ್ಕಳ ನಿರಂತರ ಕಲಿಕೆಗೆ ಸಹಾಯ ಮಾಡುವ ಅಭಿ ಪ್ರೇರಣ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವುದು, ಮಕ್ಕಳ ಕಲಿಕಾ ಕೊರತೆ ಗಳನ್ನು ಕಡಿಮೆ ಮಾಡಿಕೊಳ್ಳುವ ಹಾಗೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ವಿದ್ಯಾಗಮ ಕಾರ್ಯಕ್ರಮದ ಅಂಗ ವಾಗಿ ಶಾಲಾವಾರು ಮಕ್ಕಳ, ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ, ಮಕ್ಕಳ ಜನ ವಸತಿ ಪ್ರದೇಶವಾರು 1-5 , 6-7 ಹಾಗೂ 8-10ನೇ ತರಗತಿ ಮಕ್ಕಳ ಗುಂಪುಗಳಾಗಿ ವರ್ಗೀಕರಿಸಿಕೊಂಡು 20-25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಆ ಮಕ್ಕಳ ಸಂಪೂರ್ಣ ಶೈಕ್ಷಣಿಕ ಪ್ರಗತಿಯ ಜವಾಬ್ದಾರಿ ಅವರದೇ ಆಗಿದೆ.

ಪ್ರತಿ ಮಾರ್ಗದರ್ಶಿ ಶಿಕ್ಷಕರು ತಮಗೆ ದೊರೆತಿರುವ ಮಕ್ಕಳ ಮನೆಯಲ್ಲಿ ಲಭ್ಯವಿರುವ ಕಲಿಕೆಗೆ ಸಹಾಯಕವಾಗುವ ಸಂಪರ್ಕ ಮಾಧ್ಯಮಗಳಾದ ಕಂಪ್ಯೂ ಟರ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌, ಟ್ಯಾಬ್‌ ಸೇರಿದಂತೆ ಇತರ ಉಪಕರಣಗಳ ಪಟ್ಟಿ ಮಾಡಲಿದ್ದಾರೆ ಹಾಗೂ ಅವುಗಳ ಆಧಾರದ ಮೇಲೆ ಮೂರು ಕಾಲ್ಪನಿಕ ಕಲಿಕಾ ಕೋಣೆಗಳನ್ನು ರೂಪಿಸಿಕೊಳ್ಳುವುದು.

ಮೂರು ವಿಭಾಗದಲ್ಲಿ ತರಗತಿ
ವಿದ್ಯಾರ್ಥಿಗಳಲ್ಲಿ ಇರುವ ತಂತ್ರಜ್ಞಾನ ಹಾಗೂ ಇತರೆ ಸೌಲಭ್ಯ ಗಮನಿಸಿ ಮೂರು ವಿಭಾಗದಲ್ಲಿ ತರಗತಿ ತೆಗೆದು ಕೊಳ್ಳಲಾಗುತ್ತಿದೆ. ಯಾವುದೇ ತಂತ್ರಜಾನ ಆಧಾರಿತ ಸಾಧನಗಳು ಇಲ್ಲದ ಮಕ್ಕಳ ತರಗತಿ, ಇಂಟರ್‌ನೆಟ್‌ ರಹಿತ ಮೊಬೈಲ್‌ ಫೋನ್‌ ಹೊಂದಿರುವ ತರಗತಿ, ಇಂಟರ್‌ನೆಟ್‌ ಸಹಿತ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಟ್ಯಾಬ್‌, ಮೊಬೈಲ್‌ ಫೋನ್‌ ಹೊಂದಿರುವ ತರಗತಿಗಳು ನಡೆಯಲಿವೆ.

Advertisement

ಮೂರು ವಿಭಾಗಗಳನ್ನು ಮಕ್ಕಳ ಜನ ವಸತಿವಾರು ಗರಿಷ್ಟ 4-5 ಮಕ್ಕಳಿಗೆ ಒಂದು ಚಿಕ್ಕ ಕಲಿಕಾ ತಂಡ (ನೆರೆಹೊರೆ ತಂಡ)ವನ್ನು ಮಕ್ಕಳ ಮನೆಯ ಅಂಗಳ, ಪ್ರಾಂಗಣ, ಸಮುದಾಯ ಭವನ, ಧಾರ್ಮಿಕ ಸ್ಥಳಗಳಲ್ಲಿ ಗುರುತಿಸಿ, ಮಕ್ಕಳ ಮನೆಗೆ ಮಾರ್ಗದರ್ಶಿ ಶಿಕ್ಷಕರು ವಾರಕ್ಕೊಮ್ಮೆಯಾದರೂ ಭೇಟಿ ನೀಡಿ, ಸರಕಾರ ನಿಗದಿಪಡಿಸಿದ ಪಠ್ಯವನ್ನು ಪೂರ್ಣಗೊಳಿಸಬೇಕು. ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಹಾಗೂ ಕಲಿಕಾ ದಾಖಲೆಯನ್ನು ಶಿಕ್ಷಕರು ಪರಿಶೀಲಿಸಲಿದ್ದಾರೆ. ಜತೆಗೆ ಪಠ್ಯೇತರ ಚಟುವಟಿಕೆಯನ್ನು ಮಾಡಲಾಗುತ್ತದೆ.

ಮಾರ್ಗದರ್ಶಿ ಶಿಕ್ಷಕರು ವಿದ್ಯಾಗಮ ಕಾರ್ಯಕ್ರಮದೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ದಾಖಲಾತಿ ಆಂದೋ ಲನ ವನ್ನು ನಿರ್ವಹಿಸುವುದರೊಂದಿಗೆ ವಲಸೆ ಮಕ್ಕಳನ್ನೂ ಶಾಲೆಗೆ ದಾಖಲಿಸಲಿದ್ದಾರೆ. ಚಂದನ ವಾಹಿನಿಯಲ್ಲಿ “ಸಂವೇದ’ವನ್ನು ಎಲ್ಲ ಮಕ್ಕಳು ನೋಡುವಂತೆ ಪೋಷಕರು ಪ್ರೇರೇಪಿಸಲಿದ್ದಾರೆ.

ಬೋಧನಾ ಪ್ರಕ್ರಿಯೆ ಹೇಗೆ?
1-5ನೇ ತರಗತಿ ಮಕ್ಕಳಿಗೆ ನೆರೆಹೊರೆ ತಂಡದಲ್ಲಿ ಮಾರ್ಗದರ್ಶಿ ಶಿಕ್ಷಕರೇ ಎಲ್ಲ ವಿಷಯಗಳನ್ನು ನಿರ್ವಹಿಸುವುದು. 6-10ನೇ ತರಗತಿಗೆ ಮಾರ್ಗದರ್ಶಿ ಶಿಕ್ಷಕರು ಹಾಗೂ ಇತರ ವಿಷಯಗಳನ್ನು ಬೋಧಿಸುವ ಶಿಕ್ಷಕರ ಸಮನ್ವಯದೊಂದಿಗೆ ಸಾಧಿಸಿ ಕಲಿಕೆ ನಿರ್ವಹಿಸಲಿದ್ದಾರೆ. ಇಲಾಖೆ ನಿರ್ದಿಷ್ಟಪಡಿಸಿದ ಹಾಗೂ ಕಡಿತಗೊಳಿಸಿದ ಪಠ್ಯಕ್ರಮವನ್ನು ಅನುಸರಿಸಿ ಅದಕ್ಕೆ ಅನುಗುಣವಾಗಿ ಕಲಿಕಾಪೂರಕ ಚಟುವಟಿಕೆಗಳನ್ನು ಆಯೋಜಿಸಲಿದ್ದಾರೆ.

ಬದ್ಧತೆಯಿಂದ ಕಾರ್ಯ
ಜಿಲ್ಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಅತ್ಯಂತ ಬದ್ಧತೆ ಹಾಗೂ ಮಕ್ಕಳ ಮೇಲಿನ ಕಾಳಜಿಯಿಂದ ಶಿಕ್ಷಕರು ನಿರ್ವಹಿಸುತ್ತಿದ್ದಾರೆ.
-ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next