ರಾಮನಗರ: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಿಲ್ಲ. ಮಕ್ಕಳಿಗೆ ನಿರಂತರ ಕಲಿಕೆಯೂ ಲಭ್ಯವಾಗುತ್ತಿಲ್ಲ. ಶಾಲೆಗಳು ಆರಂಭವಾಗುವವರೆಗೂ ಮಕ್ಕಳನ್ನು ನಿರಂತರ ಕಲಿಕೆಗೆ ಹಚ್ಚುವ ಸಲುವಾಗಿ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗವಾಗಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತಂದಿದೆ. ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ಜಾರಿಯಾಗಿದ್ದು, ಪೋಷಕರು ಮತ್ತು ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ವಟಾರ ಶಾಲೆ: ಖಾಸಗಿ ಅನುದಾನ ರಹಿತ ಶಾಲೆಗಳು ಆನ್ ಲೈನ್ ತರಗತಿ, ವಾಟ್ಸಪ್ ಮೂಲಕ ತರಗತಿಗಳನ್ನು ನಡೆಸುತ್ತಿವೆ. ಆದರೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಮಕ್ಕಳಿರುವ ಸ್ಥಳಕ್ಕೆ ಶಿಕ್ಷಕರು ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ. ವಿಶೇಷವಾಗಿ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಖಾಸಗಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಪಾಠಗಳು ಆರಂಭವಾಗಿವೆ. ನಾಗರಿಕರು ಈ ವ್ಯವಸ್ಥೆಯನ್ನು ವಟಾರ ಶಾಲೆ ಎಂದು ಕರೆಯುತ್ತಿದ್ದಾರೆ. ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದೇ ಮಕ್ಕಳ ತರಗತಿ ನಡೆಸುವುದು ಈ ಕಾರ್ಯಕ್ರಮದ ವಿಶೇಷ.
ಹೇಗೆ ನಡೆಯುತ್ತೆ ತರಗತಿಗಳು?: ನಗರ, ಪಟ್ಟಣ, ಗ್ರಾಮಗಳಲ್ಲಿ ಮಾರ್ಗದರ್ಶಿ ಶಿಕ್ಷಕರು ತಮಗೆ ನಿಯೋಜಿತ ಪ್ರದೇಶದ ವಿದ್ಯಾರ್ಥಿಗಳನ್ನು ಅವರ ಮನೆ ಸಮೀಪವೇ ಇರುವ ದೇವಾಲಯಗಳ ಆವರಣ, ಅರಳಿ ಕಟ್ಟೆ, ಮನೆಗಳ ಮುಂದೆ ಇರುವ ಜಗುಲಿ ಹೀಗೆ ಸ್ಥಳಗಳನ್ನು ಗುರುತಿಸಿದ್ದಾರೆ. ಮಕ್ಕಳಿಗೂ ಸುಲಭವಾಗಿ ಬಂದು ಹೋಗುವ ಸ್ಥಳಗಳಿವು. ಇಲ್ಲಿಗೆ ಬರುವ ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಂಡು ಕೂರಬೇಕಾಗಿದೆ. ಶಿಕ್ಷಕರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಕೊಡುತ್ತಾರೆ. ಅಭ್ಯಾಸ ಹಾಳೆಗಳನ್ನು, ರೂಪಣಾತ್ಮಕ ಪ್ರಶ್ನೆ ಪತ್ರಗಳನ್ನು ವಿತರಿಸುತ್ತಿದ್ದಾರೆ. ಮಕ್ಕಳು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಾವು ಬರೆದಿದ್ದನ್ನು ಶಿಕ್ಷಕರಿಗೆ ಒಪ್ಪಿಸುತ್ತಾರೆ. ಶಿಕ್ಷಕರು ಇವುಗಳ ಮೌಲ್ಯಮಾಪನ ಮಾಡುವರು. 1 ರಿಂದ 5ನೇ ತರಗತಿಯ ಮಕ್ಕಳಿಗೆ ಮಾರ್ಗದರ್ಶಿ ಶಿಕ್ಷಕರು ಎಲ್ಲಾ ವಿಷಯಗಳನ್ನು ನಿರ್ವಹಿಸುತ್ತಿದ್ದಾರೆ. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯಾ ವಿಷಯ ಬೋಧಕರು ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ದಿನ ನಿತ್ಯ ಪೂರೈಕೆ ಯಾಗುತ್ತಿದ್ದ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪುಡಿ, ಬಿಸಿ ಯೂಟ ಕಾರ್ಯಕ್ರಮದಡಿ ದಿನಸಿ ಪದಾರ್ಥಗಳು ಮಕ್ಕಳ ಪೋಷಕರಿಗೆ ತಲುಪುತ್ತಿದೆ.
ಮಕ್ಕಳ ನಿರಂತರ ಕಲಿಕೆಗಾಗಿ ಪೂರಕವಾಗಿ ವಿದ್ಯಾಗಮ ಕಾರ್ಯಕ್ರಮ ಜಾರಿಯಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳ ಆಸಕ್ತಿಗೆ, ಕಲಿಕೆ ಅಗತ್ಯವನ್ನು ಗಮನಿಸಿ ಶಿಕ್ಷಕರು ಚಟುವಟಿಕೆಗಳನ್ನು ಕೊಡುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದಲೇ ಅಗತ್ಯ ಮಾರ್ಗಸೂಚಿಗಳ ಪ್ರಕಾರ ಈ ಕಾರ್ಯಕ್ರಮ ನಡೆಯುತ್ತಿದೆ.
–ಮರೀಗೌಡ, ಬಿಇಒ, ರಾಮಗನರ