Advertisement
ನಿಗದಿತ ವೇಳೆಗಿಂತ ಸ್ವಲ್ಪ ತಡವಾಗಿ ಜೋಡುಕಟ್ಟೆಯಿಂದ ಮೆರವಣಿಗೆ ಹೊರಟು ನಿಗದಿತ ಸಮಯಕ್ಕೆ ಸರಿಯಾಗಿ ಸರ್ವಜ್ಞ ಪೀಠಾರೋಹಣ ಮಾಡಿದರು. ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಚಂದ್ರೇಶ್ವರ, ಅನಂತೇಶ್ವರ ದೇವಸ್ಥಾನ, ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದರು. ಪೂಜಾಧಿಕಾರದ ಸಂಕೇತವಾಗಿ ಅಕ್ಷಯ ಪಾತ್ರೆ, ಸೌಟು, ಕೀಲಿ ಕೈಗಳನ್ನು ಪೇಜಾವರ ಶ್ರೀಗಳಿಂದ ಸ್ವೀಕರಿಸಿದ ಪಲಿಮಾರು ಶ್ರೀಗಳು ಬಳಿಕ ಬಡಗುಮಾಳಿಗೆಯಲ್ಲಿ ಗಂಧಾದಿ ಉಪಚಾರಗಳನ್ನು ಇತರ ಸ್ವಾಮೀಜಿಯವರಿಗೆ ಸಲ್ಲಿಸಿದರು.
ಪೇಜಾವರ ಶ್ರೀಗಳು ಐದನೆಯ ಬಾರಿಗೆ ಪರ್ಯಾಯ ಪೂಜೆ ಮಾಡಿದ ಹಿನ್ನೆಲೆಯಲ್ಲಿ ಪಲಿಮಾರು ಶ್ರೀಗಳು “ಯತಿಕುಲತಿಲಕ’ ಬಿರುದು ನೀಡಿ ಅಭಿನಂದಿಸಿದರು. ಪೇಜಾವರ ಶ್ರೀಗಳಲ್ಲಿ ಭಗವಂತ, ಪ್ರಾಣದೇವರು, ಆಚಾರ್ಯ ಮಧ್ವರ ವಿಶೇಷ ಸನ್ನಿಧಾನವಿದೆ ಎಂದು ಪಲಿಮಾರು ಶ್ರೀಗಳು ಬಣ್ಣಿಸಿದರು.
Related Articles
Advertisement
ಚಿನ್ನದ ಗೋಪುರಕ್ಕೆ ನಿರ್ಧಾರ:ತಿರುಪತಿ ಕಾಂಚನ ಬ್ರಹ್ಮ, ಪಂಢರಪುರ ನಾದಬ್ರಹ್ಮ, ಉಡುಪಿ ಅನ್ನಬ್ರಹ್ಮ ಎಂದು ಕರೆಯುತ್ತಾರೆ. ತಿರುಪತಿಯ ಚಿನ್ನದ ಗೋಪುರದಂತೆ ಉಡುಪಿಯಲ್ಲಿಯೂ ಚಿನ್ನದ ಗೋಪುರ ಮಾಡಲು ಪಲಿಮಾರು ಶ್ರೀಗಳು ನಿರ್ಧರಿಸಿದ್ದಾರೆ. ಪಂಢರಪುರದಂತೆ ನಿರಂತರ ಭಜನೆಯನ್ನೂ ಕೈಗೆತ್ತಿಕೊಂಡಿದ್ದಾರೆ. ಇವು ಮೂರೂ ಒಂದೆಡೆ ಸಮ್ಮಿಲನಗೊಳ್ಳಲಿವೆ ಎಂದು ಶ್ರೀ ಸೋದೆ ಸ್ವಾಮೀಜಿ ತಿಳಿಸಿದರು. ಪೇಜಾವರ ಶ್ರೀಗಳು ಐದನೇ ಪರ್ಯಾಯದಿಂದ ನಿರ್ಗಮಿಸುವ ಬೇಸರ, ಪಲಿಮಾರು ಶ್ರೀಗಳು ಪರ್ಯಾಯ ಪೀಠಕ್ಕೇರುವ ಸಂತೋಷದ ಸಮಾಗಮದಲ್ಲಿ ನಾವಿದ್ದೇವೆ ಎಂದು ಶ್ರೀ ಕಾಣಿಯೂರು ಸ್ವಾಮೀಜಿ ತಿಳಿಸಿದರು. ಎಲ್ಲ ಧರ್ಮಕ್ಕಿಂತಲೂ ಪುಂಡರೀಕಾಕ್ಷನನ್ನು ಸ್ತೋತ್ರದೊಂದಿಗೆ ಅರ್ಚಿಸುವುದೇ ಶ್ರೇಷ್ಠ ಎಂದು ಭೀಷ್ಮರು ವಿಷ್ಣುಸಹಸ್ರನಾಮ ಉಪದೇಶ ಮಾಡಿದರು. ಪಲಿಮಾರು ಶ್ರೀಗಳು ವಿಷ್ಣುಸಹಸ್ರನಾಮದಿಂದ ಅರ್ಚಿಸಲು ನಿರ್ಧರಿಸಿದ್ದಾರೆಂದು ಪೇಜಾವರ ಕಿರಿಯ ಶ್ರೀಗಳು ಹೇಳಿದರು. ಭಗವಂತ ವಿವಿಧ ಅವತಾರಗಳನ್ನು ತಳೆದಿದ್ದಾನೆ. ವಾಮನರೂಪಿಯಾದ ಪೇಜಾವರ ಶ್ರೀಗಳ ಪರ್ಯಾಯ ಮುಗಿದರೆ ಈಗ ತ್ರಿವಿಕ್ರಮರೂಪಿ ಪಲಿಮಾರು ಶ್ರೀಗಳ ಪರ್ಯಾಯ ಆರಂಭವಾಗಿದೆ ಎಂದು ಶೀರೂರು ಸ್ವಾಮೀಜಿ ಬಣ್ಣಿಸಿದರು. ನಮ್ಮ ಬಯಕೆಯನ್ನೇ ಭಗವಂತ ಪೇಜಾವರ ಶ್ರೀಗಳ ಮೂಲಕ ಪೂಜೆ ಮಾಡಿಸಿಕೊಂಡ ಎಂದು ಕೃಷ್ಣಾಪುರ ಶ್ರೀಗಳು ಹೇಳಿದರು. ಪ್ರಯಾಗ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಕಾರ್ಯಕ್ರಮ ನಿರ್ವಹಿಸಿದರು. ಯಶೋದೆಗೆ ಕೃಷ್ಣನ ಮೇಲೆ ಪ್ರೇಮವಿತ್ತು. ಜ್ಞಾನವೂ ಇರಲಿಲ್ಲ, ವೈರಾಗ್ಯವೂ ಇರಲಿಲ್ಲ. ಹೀಗಾಗಿ ಕೃಷ್ಣನನ್ನು ಕಟ್ಟುವಾಗ ಹಗ್ಗ ಎರಡು ಅಂಗುಲ ಕಡಿಮೆಯಾಯಿತು. ವಾದಿರಾಜರು ಇದನ್ನು “ನಮಗೂ ಜ್ಞಾನ, ಭಕ್ತಿ, ವೈರಾಗ್ಯವಿದೆ. ಆದರೆ ಅದಲು ಬದಲು ಆಗಿದೆ. ದ್ರವ್ಯ ಸಂಪಾದನೆಯಲ್ಲಿ ಜ್ಞಾನ, ಸಂಸಾರದಲ್ಲಿ ಭಕ್ತಿ, ದೇವರಲ್ಲಿ ವೈರಾಗ್ಯವಿದೆ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಪ್ರಪಂಚದ ಮೇಲೆ ವೈರಾಗ್ಯ, ದೇವರಲ್ಲಿ ಭಕ್ತಿ ಮತ್ತು ಜ್ಞಾನ ಇರಬೇಕು.
– ಪೇಜಾವರ ಶ್ರೀಗಳು