ಚೆನ್ನೈ: ಕಾಲಿವುಡ್ ಸಿನಿಮಾರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ (Vetrimaaran) ಅವರ ಬಹುನಿರೀಕ್ಷಿತ ʼವಿದುತಲೈ -2ʼ (Viduthalai Part 2) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
2023ರಲ್ಲಿ ʼವಿದುತಲೈʼ ಸಿನಿಮಾ ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಲಿಸ್ಟ್‌ಗೆ ಸೇರಿತ್ತು. ದಟ್ಟ ಕಾಡಿನೊಳಗೆ ಇರುವ ಹಳ್ಳಿಯೊಂದರಲ್ಲಿ ಬದುಕುತ್ತಿರುವ ಸಮುದಾಯವೊಂದರ ಸುತ್ತ ಸಾಗುವ ಕಥೆಯನ್ನು ಹೇಳಿದ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ‘ಪೆರುಮಾಳ್’ ಆಗಿ ಕಾಣಿಸಿಕೊಂಡಿದ್ದರು.
ʼಪೆರುಮಾಳುʼ ನಿಂದ ʼಪೆರುಮಾಳ್ ವಾಥಿಯಾರ್ʼ ಆಗಿ ಉಗ್ರರೂಪ ತಾಳಿ ಆಕ್ರಮಣಕಾರಿ ತಂಡವನ್ನು ಕಟ್ಟುವುದು ಯಾಕೆ? ಕಾಡಿನೊಳಗೆ ತಮ್ಮ ತಂಟೆಗೆ ಬರುವ ಅಧಿಕಾರಿ, ಪೊಲೀಸ್, ಕಾನೂನು ವ್ಯವಸ್ಥೆಯ ವಿರುದ್ಧವಾಗಿ ನಿಲ್ಲುವ ಆತನ ಹಿನ್ನೆಲೆ ಏನು ಎನ್ನುವುದ ಸುತ್ತ ʼವಿದುತಲೈ-2ʼ ಕಥೆ ಸಾಗಲಿದೆ.
ದಮನಿತ ವರ್ಗದ ಧ್ವನಿಯಂತೆ ಇಲ್ಲಿ ಸೇತುಪತಿ ʼಪೆರುಮಾಳ್ʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಬಂಧನ, ಇನ್ನೊಂದು ಕಡೆ ಗುಂಡಿನ ಸದ್ದಿನ ನಡುವೆಯೇ ಒಂದು ನೈಜ ಕಥೆಯಂತೆಯೇ ಇಲ್ಲಿ ಒಂದು ವರ್ಗದ ಬದುಕಿನ ಮೇಲೆ ಕಥೆಯನ್ನು ಹಣೆಯಲಾಗಿದೆ.
ವೆಟ್ರಿಮಾರನ್ ಅವರ ಬಹುತೇಕ ಸಿನಿಮಾಗಳಲ್ಲಿ ಇರುವಂತೆಯೇ ಬಂದೂಕು, ಗುಂಡು, ರಕ್ತ, ಅವಮಾನ, ಹಿಂಸಾಚಾರ, ಸ್ವಾರ್ಥ, ರಿವೆಂಜ್, ಅಧಿಕಾರ ಈ ಅಂಶಗಳು ಚಿತ್ರದಲ್ಲಿ ಇರಲಿದೆ ಎನ್ನುವುದು ಟ್ರೇಲರ್ ನೋಡುವಾಗ ಗೊತ್ತಾಗುತ್ತದೆ.
ಮಂಜು ವಾರಿಯರ್ ಸಾಮಾಜಿಕ ಕಾರ್ಯಕರ್ತೆಯಂತೆ ಇಲ್ಲಿ ಕಾಣಿಸಿಕೊಂಡಿದ್ದು, ʼಪೆರುಮಾಳ್ʼ ಪತ್ನಿ ಪಾತ್ರವನ್ನು ನಿಭಾಯಿಸಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ʼಸೂರಿʼ ಸಿನಿಮಾದ ಪ್ರಧಾನ ಪಾತ್ರದಲ್ಲಿ ಒಬ್ಬರಾಗಿದ್ದಾರೆ.
ಇನ್ನುಳಿದಂತೆ ಗೌತಮ್ ವಾಸುದೇವ್ ಮೆನನ್, ಕಿಶೋರ್ ಮುನ್ನಾರ್ ರಮೇಶ್, ರಾಜೀವ್ ಮೆನನ್, ಬಾಲಾಜಿ ಶಕ್ತಿವೇಲ್ ಮುಂತಾದವರ ಪಾತ್ರದ ಝಲಕ್ ಟ್ರೇಲರ್‌ನಲ್ಲಿ ತೋರಿಸಲಾಗಿದೆ.
“ಸಿದ್ಧಾಂತವಿಲ್ಲದ ನಾಯಕರು ಅಭಿಮಾನಿಗಳನ್ನು ಮಾತ್ರ ಸಂಪಾದಿಸುತ್ತಾರೆ. ಅದು ಪ್ರಗತಿಗೆ ದಾರಿ ಮಾಡಿಕೊಡುವುದಿಲ್ಲ..” ಹೀಗೆ ಜಾತಿ, ಧರ್ಮ, ರಾಜಕೀಯದ ಸುತ್ತ ಕೆಲ ಪವರ್ ಫುಲ್ ಡೈಲಾಗ್ಸ್‌ಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಇಡೀ ಟ್ರೇಲರ್‌ನಲ್ಲಿ ಸೇತುಪತಿ ಅಭಿನಯ ಎದ್ದು ಕಾಣುತ್ತದೆ. ಅವರ ಅಭಿನಯಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ.
ದಿಗ್ಗಜ ಇಳಯರಾಜ ಅವರ ಸಂಗೀತ ಸಿನಿಮಾಕ್ಕಿದೆ. ಇದೇ ಡಿಸೆಂಬರ್ 20ಕ್ಕೆ ಚಿತ್ರ ತೆರೆ ಕಾಣಲಿದೆ.