Advertisement

ವಿಧಾನ ಕಲಾಪ ಬಲಿ : ಯತ್ನಾಳ್‌ ಹೇಳಿಕೆ ಪ್ರತಿಧ್ವನಿ, ಚರ್ಚೆಗೆ ವಿಪಕ್ಷ ಪಟ್ಟು

10:15 AM Mar 04, 2020 | sudhir |

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವಹೇಳನಕಾರಿ ಹೇಳಿಕೆ ನೀಡಿದ್ದು, ಆ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಪಟ್ಟು ಹಿಡಿದು ಧರಣಿ ನಡೆಸಿದ್ದರಿಂದ ಉಭಯ ಸದನಗಳಲ್ಲಿ ಗದ್ದಲ ಕೋಲಾಹಲದ ವಾತಾವರಣ ನಿರ್ಮಾಣವಾಗಿ ಇಡೀ ದಿನದ ಕಲಾಪ ಬಲಿಯಾಯಿತು.

Advertisement

ವಿಧಾನಸಭೆಯಲ್ಲಿ ಎರಡು ಬಾರಿ ಸದನ ಮುಂದೂಡಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಪಕ್ಷ ನಾಯಕರನ್ನು ತಮ್ಮ ಕೊಠಡಿಗೆ ಕರೆದು ಸಂಧಾನ ಸಭೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್‌- ಜೆಡಿಎಸ್‌ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಸದನ ಬರ್ಖಾಸ್ತು ಗೊಂಡಿತು. ಗದ್ದಲದ ನಡುವೆಯೇ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ “ಶಾಸ್ತ್ರ’ ಮುಗಿಸಿದರು. ಸಂಜೆ ಎಂಟು ಮಸೂದೆಗಳನ್ನು ಮಂಡಿಸಲಾಯಿತು.

ವಿಧಾನ ಪರಿಷತ್‌ನಲ್ಲೂ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ಅವರು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆ ವಿಷಯ ಪ್ರಸ್ತಾವಿಸಿ ಚರ್ಚೆಗೆ ಪಟ್ಟು ಹಿಡಿದರು. ಸಭಾ ಪತಿ ನಿರಾಕರಿಸಿದಾಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಧರಣಿ ನಡೆಸಿದ್ದರಿಂದ ಕಲಾಪ ನಡೆಯಲಿಲ್ಲ.

ಸಿಎಂ ಉತ್ತರ ಮತ್ತು ಪ್ರಶ್ನೋತ್ತರ ಕಾರ್ಯಸೂಚಿಯಲ್ಲಿತ್ತಾದರೂ ಯಾವುದಕ್ಕೂ ವಿಪಕ್ಷ ಸದಸ್ಯರು ಅವಕಾಶ ನೀಡಲಿಲ್ಲ.

ಚರ್ಚೆಗೆ ಅವಕಾಶ ಕೇಳಿದ ಸಿದ್ದು
ವಿಧಾನಸಭೆಯಲ್ಲಿ ಬೆಳಗ್ಗೆ ಸದನ ಆರಂಭಗೊಂಡು ಅಗಲಿದ ಗಣ್ಯರಿಗೆ ಸಂತಾಪದ ಅನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎದ್ದು ನಿಂತು, ಯತ್ನಾಳ್‌ ಅವರು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದರು. ಇದಕ್ಕೆ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಕೆ.ಎಸ್‌. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಸಚಿವ ಸಿ.ಸಿ. ಪಾಟೀಲ್‌ ಮತ್ತು ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದರು.

Advertisement

ಅಜೆಂಡಾದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಸರಕಾರದಿಂದ ಉತ್ತರ ಎಂದಿದೆ. ಸ್ಪೀಕರ್‌ಗೆ ನೋಟಿಸ್‌ ನೀಡದೆ ವಿಷಯ ಪ್ರಸ್ತಾಪ ಮಾಡುವುದು ಹೇಗೆ? ಯಾವ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಸಿದ್ದರಾಮಯ್ಯ, ಸ್ಪೀಕರ್‌ಗೆ ವಿಶೇಷ ಅಧಿಕಾರ ಇದ್ದು, ನಾನು ವಿಷಯ ಪ್ರಸ್ತಾಪಿಸುತ್ತೇನೆ. ಅನಂತರ ಅವರು ತೀರ್ಮಾನ ಕೊಡಲಿ ಎಂದು ಹೇಳಿದರು.

ಸಿಎಂ ಉತ್ತರದ ಅನಂತರ ಅವಕಾಶ
ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮೊದಲು ಮುಖ್ಯಮಂತ್ರಿಯವರ ಉತ್ತರ ಮುಗಿಯಲಿ. ಅನಂತರ ನಿಮ್ಮ ವಿಷಯದ ಬಗ್ಗೆ ಗಮನಿಸುತ್ತೇನೆ. ಅದಕ್ಕೂ ಮೊದಲು ನೀವು ಮಾತನಾಡಲಿರುವ ವಿಷಯದ ಕುರಿತು ನೋಟಿಸ್‌ ಕೊಡಿ ಎಂದರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ, ಮಾತನಾಡಲು ಅವಕಾಶಕ್ಕಾಗಿ ಪಟ್ಟು ಹಿಡಿದರು.

“ನಿಯಮ’ದ ಸಮಸ್ಯೆ
ಯಾವ ನಿಯಮದಲ್ಲಿ ಕೇಳುತ್ತಿದ್ದೀರಿ, ಸದನ ನಡೆಸಲು ನಿಯಮ ಇಲ್ಲವೇ ಎಂದು ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು. ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಸದನದ ನಿಯಮ ರೂಪಿಸುವಾಗ ಇಂತಹ ಸಂದರ್ಭ ಬರುತ್ತದೆ ಎಂದು ಗೊತ್ತಿರಲಿಲ್ಲ, ಇಂಥ ಮಹಾನುಭಾವರು ಈ ಸದನಕ್ಕೆ ಬರಬಹುದು ಎಂಬುದೂ ಗೊತ್ತಿರಲಿಲ್ಲ ಎಂದರು. ಅದಕ್ಕೆ ಮಾಧುಸ್ವಾಮಿ, ಯಾರು ದೊಡ್ಡವರು- ಯಾರು ಚಿಕ್ಕವರು ಎಂದು ಜನ ತೀರ್ಮಾನ ಮಾಡಿ ಕಳುಹಿಸುತ್ತಾರೆ ಎಂದು ತಿರುಗೇಟು ನೀಡಿದರು.

ಸದನದ ಬಾವಿಗಿಳಿದ ಸದಸ್ಯರು
ಅಂತಿಮವಾಗಿ ಸ್ಪೀಕರ್‌, ಈಗ ಚರ್ಚೆಗೆ ಅವಕಾಶ ಕೊಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ ಎಂದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಗದ್ದಲದ ನಡುವೆಯೇ ಸಿಎಂ ಯಡಿಯೂರಪ್ಪ ಭಾಷಣ ಆರಂಭಿಸಿ ಉತ್ತರ ಪೂರ್ಣಗೊಳಿಸಿದರು.

ಫ‌ಲಿಸದ ಸ್ಪೀಕರ್‌ ಸಂಧಾನ
ಸ್ಪೀಕರ್‌ ಕಾಗೇರಿ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರನ್ನು ತಮ್ಮ ಕೊಠಡಿಗೆ ಕರೆದು ಸಂಧಾನ ಸಭೆ ನಡೆಸಿದರು. ಆದರೆ ಅವರು ವಿಷಯ ಚರ್ಚೆಗೆ ಅವಕಾಶ ಬೇಕೇ ಬೇಕು ಎಂದು ಪಟ್ಟು ಹಿಡಿದರು. ಅನಂತರ ಸದನ ಆರಂಭಗೊಂಡು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next