ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ವಿಧಾನಸಭೆ ಚುನಾವಣೆ ಅಖಾಡ ಸಿದ್ಧಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸ್ಪರ್ಧೆಗೆ ಸಿದ್ಧಗೊಳ್ಳುತ್ತಿದ್ದು, ತ್ರಿಕೋನ ಸ್ಪರ್ಧೆಗೆ ವೇದಿಕೆ ರೆಡಿಯಾಗುತ್ತಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜೆಡಿಎಸ್ ಜಿಲ್ಲೆಯಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಯಿತು. ಬಿಜೆಪಿ 4 ಕ್ಷೇತ್ರಗಳಲ್ಲಿ ಗೆದ್ದು ಬೀಗಿತು.
ಮಾಜಿ ಪ್ರಧಾನಿ ಇಂದಿರಾ ಗಾಂ ಧಿಗೆ ರಾಜಕೀಯ ಪುನರ್ಜನ್ಮ ನೀಡಿ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ಕಾಂಗ್ರೆಸ್ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಪಡೆದ ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆಯಲ್ಲಿ ತನ್ನ ಶಕ್ತಿ ಪ್ರದರ್ಶಿಸುವ ಅನಿವಾರ್ಯತೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಗೊಳ್ಳುತ್ತಿದೆ.
ಅಭ್ಯರ್ಥಿಗಳ ಗುಟ್ಟು ಬಿಡದ ಕಾಂಗ್ರೆಸ್: ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಕಾಂಗ್ರೆಸ್ ಅಭ್ಯರ್ಥಿಗಳು ಯಾರೆಂದು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್ ಪಾಳಯದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದು, ಸಮರ್ಥ ಅಭ್ಯರ್ಥಿಗಳನ್ನು ಅಳೆದು ತೂಗಿ ಕಣಕ್ಕಿಳಿಸುವ ಯೋಚನೆಯಲ್ಲಿದೆ.
ಜೆಡಿಎಸ್‌ನಲ್ಲಿ ಹೊಸ ಮುಖಗಳಿಗೆ ಮಣೆ: ಗಟ್ಟಿ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಸಜ್ಜಾಗುತ್ತಿರುವ ಜೆಡಿಎಸ್ ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಕ್ಷ ಅ ಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸದಿದ್ದರೂ ಟಿಕೆಟ್ ಆಕಾಂಕ್ಷಿಗಳು ಫೀಲ್ಡಿಗಿಳಿದು ಕೆಲಸ ಆರಂಭಿಸಿದ್ದಾರೆ. ಇವರಿಗೆ ಪಕ್ಷ ಮಣೆ ಹಾಕುತ್ತಾ ಅಥವಾ ಬೇರೆಯವರನ್ನು ಕಣಕ್ಕಿಳಿಸುತ್ತಾ ಎಂಬ ಕುತೂಹಲ ಮೂಡಿಸಿದೆ.
ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಖಾತೆ ತೆರೆಯದಿದ್ದರೂ ಎರಡು ರಾಷ್ಟ್ರೀಯ ಪಕ್ಷಗಳಿಗೂ ಬಿಗ್ ಫೈಟ್ ನೀಡಿ, ರಾಜಕೀಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿತ್ತು. ಈ ಬಾರಿಯೂ ಅದೇ ಮಾದರಿಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಫೈಟ್ ನೀಡಲು ವೇದಿಕೆ ಅಣಿಗೊಳಿಸುತ್ತಿದೆ. ಮಾಸ್ಟರ್ ಪ್ಲಾನ್ ವರ್ಕ್ ಆಗುತ್ತಾ ಎನ್ನುವುದನ್ನು ನೋಡಬೇಕಿದೆ.
ಬಿಜೆಪಿ ಪಾಳಯದಲ್ಲೂ ಚುನಾವಣೆ ಕಾವು: ಚಿಕ್ಕಮಗಳೂರು ಜಿಲ್ಲೆ ಸದ್ಯ ಬಿಜೆಪಿ ಭದ್ರಕೋಟೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 1 ಕ್ಷೇತ್ರ ಹೊರತುಪಡಿಸಿ ಉಳಿದ 4 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಜಿಲ್ಲೆಯಲ್ಲಿ ಭದ್ರ ಬುನಾದಿ ಹಾಕಿದೆ. ಕಳೆದ ಚುನಾವಣೆಯಲ್ಲಿ ಯಾರ್ಯಾರು ಸ್ಪರ್ಧಿಸಿದ್ದರೋ ಅವರೇ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಪಾಳಯದಲ್ಲೂ ಚುನಾವಣೆ ರಣತಂತ್ರ ರೂಪಿಸಲಾಗುತ್ತಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಪಣತೊಟ್ಟಿದೆ. ಬೂತ್‌ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಮತದಾರರನ್ನು ಸೆಳೆದುಕೊಳ್ಳಲು ಕಸರತ್ತು ನಡೆಸುತ್ತಿದೆ. ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಇದ್ದು ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗುತ್ತಿದೆ.
– ಸಂದೀಪ ಜಿ.ಎನ್.ಶೇಡ್ಗಾರ್