Advertisement

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಸ್ವಾಗತಾರ್ಹ ನಡೆ

03:01 AM Jun 26, 2021 | Team Udayavani |

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶ ಮಾಡಿದ ಎರಡು ವರ್ಷಗಳ ತರುವಾಯ ಅಲ್ಲಿನ 14 ರಾಜಕೀಯ ನಾಯಕರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದು, ಒಂದು ರೀತಿಯಲ್ಲಿ ಇದು ಫ‌ಲಪ್ರದವಾಗಿದೆ. ಸದ್ಯಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡದಿದ್ದರೂ ಸರಿಯಾದ ಸಮಯದಲ್ಲಿ ವಾಪಸ್‌ ನೀಡಲಾಗುವುದು ಎಂದು ಮೋದಿ ಅವರು ನೀಡಿದ ಭರವಸೆ ಕೆಲಸ ಮಾಡಿದೆ. ಇದಕ್ಕೆ ಅಲ್ಲಿನ ವಿಪಕ್ಷಗಳು ಸಮ್ಮತಿ ಸೂಚಿಸಿದ್ದು, ಕೇಂದ್ರ ಸರಕಾರ ಮತ್ತು ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳು ಒಂದು ದೋಣಿಗೆ ಕಾಲಿಟ್ಟಂತಾಗಿದೆ.

Advertisement

ಗುರುವಾರದ ಮಾತುಕತೆ ವೇಳೆ ಪ್ರಮುಖವಾಗಿ ಚರ್ಚೆಗೆ ಬಂದಿದ್ದು, ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆ ವಿಷಯ. 1995-96ರಲ್ಲಿ ಇಲ್ಲಿ ಪುನರ್ವಿಂಗಡಣೆಯಾಗಿದ್ದು ಬಿಟ್ಟರೆ, ಮತ್ತೆ ಆಗಿಲ್ಲ. ಹೀಗಾಗಿ ಮೊದಲಿಗೆ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿ ಬಳಿಕ ವಿಧಾನಸಭೆ ಚುನಾವಣೆ ನಡೆಸುವುದು ಕೇಂದ್ರ ಸರಕಾರದ ಇರಾದೆ. ಆದರೆ ಮೊದಲಿಗೆ ವಿಪಕ್ಷಗಳು ಆಕ್ಷೇಪವೆತ್ತಿದರೂ ಅನಂತರದಲ್ಲಿ ಇದಕ್ಕೆ ಒಪ್ಪಿಗೆ ನೀಡಿವೆ.

ಈಗ ಕೇಂದ್ರ ಸರಕಾರ ವಿಧಾನಸಭೆ ಚುನಾವಣೆ ನಡೆಸಲು ಮುಂದಾಗಿರುವುದರ ಹಿಂದೆ ಬೇರೆ ಬೇರೆ ಕಾರಣಗಳು ಇವೆ. ಸದ್ಯ ಅಮೆರಿಕದಲ್ಲಿ ಸರಕಾರ ಬದಲಾಗಿದ್ದು, ಅಲ್ಲಿ ಟ್ರಂಪ್‌ ಬದಲಿಗೆ ಜೋ ಬೈಡೆನ್‌ ಬಂದಿದ್ದಾರೆ. ಟ್ರಂಪ್‌ ಗಿಂತಲೂ ಜೋ ಬೈಡೆನ್‌ ಮತ್ತವರ ಪಕ್ಷಕ್ಕೆ ಕಾಶ್ಮೀರದ ವಿದ್ಯಮಾನಗಳು ಹೆಚ್ಚು ಆಸಕ್ತಿಕರ. ಹಾಗೆಯೇ ಪಾಕಿಸ್ಥಾನದ ಚಾಡಿ ಮಾತು ಕೂಡ. ಈ ಬಗ್ಗೆ ಮುಂದೊಂದು ದಿನ ಅಮೆರಿಕದಲ್ಲಿ ಪ್ರಸ್ತಾವವಾಗಲೂಬಹುದು. ಹೀಗಾಗಿಯೇ ಅಲ್ಲಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇರಿಸಿಕೊಂಡೇ, ಕೆಲವು ಷರತ್ತುಗಳೊಂದಿಗೆ ಆಡಳಿತ ಮಾಡುತ್ತಿದ್ದೇವೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಲು ಅನುಕೂಲವಾಗುತ್ತದೆ.

ಇವೆಲ್ಲದಕ್ಕಿಂತ ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಇಂದಿನ ಅತ್ಯಗತ್ಯದ ವಿಚಾರವಾಗಿದೆ. ಮೊದಲಿದ್ದ ಹಾಗೆ, ಈಗ ಭಾರೀ ಪ್ರಮಾಣದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿಲ್ಲ. ಹಾಗೆಯೇ ಕಲ್ಲುತೂರಾಟದಂಥ ಪ್ರಕರಣಗಳು, ಗಲಭೆಗಳು ಹತೋಟಿಗೆ ಬಂದಿವೆ. ಇಂಥ ಸಮಯದಲ್ಲಿ ಚುನಾವಣೆ ನಡೆಸಿದರೆ ಅಲ್ಲಿನ ಜನ ಕೇಂದ್ರ ಸರಕಾರದ ಮೇಲೆ ನಂಬಿಕೆ ಇರಿಸಲು ಸಹಾಯವಾಗುತ್ತದೆ. ಅದರಲ್ಲೂ ಆದಷ್ಟು ಬೇಗನೇ ಈ ಪ್ರಕ್ರಿಯೆ ಮುಗಿಯಬೇಕು. ಒಮ್ಮೆ ಇಲ್ಲಿ ಜನರಿಂದಲೇ ಸ್ಥಾಪಿತ ಸರಕಾರ ಬಂದು ಬಿಟ್ಟರೆ, ಜನ ಮತ್ತು ಸರಕಾರದ ನಡುವೆ ಸಂಪರ್ಕ ಹೆಚ್ಚಿ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಸಹಕಾರಿಯಾಗುತ್ತದೆ.

ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಅಲ್ಲಿನ ರಾಜಕೀಯ ಪಕ್ಷಗಳ ಮನವಿ  ಒಪ್ಪುವಂಥದ್ದೇ. ಕೇಂದ್ರಾಡಳಿತ ಪ್ರದೇಶವೊಂದರ ಸರಕಾರಕ್ಕೂ ಸಂಪೂರ್ಣ ರಾಜ್ಯ ಸ್ಥಾನಮಾನವಿರುವ ಸರಕಾರಕ್ಕೂ ವ್ಯತ್ಯಾಸವಿದೆ. ಹೀಗಾಗಿ ಎಲ್ಲ ಅಧಿಕಾರಗಳು ರಾಜ್ಯ ಸರಕಾರಗಳ ಬಳಿಯೇ ಇರಬೇಕು ಎಂದು ಕೇಳುವುದು ನ್ಯಾಯೋಚಿತ. ಇದಕ್ಕೆ ಪ್ರಧಾನಿ ಮೋದಿಯವರು ಸರಿಯಾದ ಸಮಯದಲ್ಲಿ ರಾಜ್ಯ ಸ್ಥಾನಮಾನ ನೀಡುತ್ತೇವೆ ಎಂದು ಹೇಳಿರುವುದು ಉಚಿತವೇ ಆಗಿದೆ. ಸದ್ಯ ಇರುವ ಎಲ್ಲ ಅಡೆತಡೆಗಳನ್ನು ಮೀರಿದ ಮೇಲೆ ಅಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಸಿಗಲೂ ಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next