Advertisement
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಏರ್ಪಟ್ಟಿದ್ದ ಮೈತ್ರಿ ಪ್ರಜ್ವಲ್ ಪ್ರಕರಣದ ಹಿನ್ನೆಲೆಯಲ್ಲಿ ಮುರಿದು ಬೀಳಬಹುದೆಂಬ ವದಂತಿಗಳು ಹರಡಿದ್ದವು. ಇದಕ್ಕೆಲ್ಲ ತೆರೆ ಎಳೆದಂತೆ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಜೂ. 3ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲೂ ಮೈತ್ರಿ ಮುಂದುವರಿದಿದೆ.
Related Articles
ಇದರಿಂದ ವಿಚಲಿತರಾದ ಜೆಡಿಎಸ್ ನಾಯಕರು ರವಿವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಶ್ರೀಕಂಠೇಗೌಡ ಉಪಸ್ಥಿತರಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೂಲಕ ಬಿಜೆಪಿ ವರಿಷ್ಠರ ಸಂಪರ್ಕ ಸಾಧಿಸಿದ ಜೆಡಿಎಸ್ ನಾಯಕ ಟಿಕೆಟ್ ಹಂಚಿಕೆ ಬಗ್ಗೆ ಮಾತುಕತೆ ನಡೆಸಿದರು.
Advertisement
ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳು ಇದ್ದು, ಇದು ಜೆಡಿಎಸ್‌ನ ಪ್ರಬಲ ನೆಲೆಯಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಇದೇ ಕ್ಷೇತ್ರದಿಂದ ಗೆದ್ದಿತ್ತು. ಆದರೆ ಜೆಡಿಎಸ್‌ನಿಂದ ಗೆದ್ದಿದ್ದ ಮರಿತಿಬ್ಬೇಗೌಡ ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದು, ಅವರಿಗೆ ಪ್ರಬಲ ಪೈಪೋಟಿ ಕೊಡುವುದಾದರೆ ಜೆಡಿಎಸ್ ಮಾತ್ರ. ಮೈತ್ರಿಧರ್ಮ ಪಾಲನೆ ಆಗುವ ಭರವಸೆಯಲ್ಲಿ ಜೆಡಿಎಸ್‌ನ ಶ್ರೀಕಂಠೇಗೌಡರು ಕ್ಷೇತ್ರಕಾರ್ಯ ಆರಂಭಿಸಿದ್ದು, ಗೆದ್ದ ಕ್ಷೇತ್ರದ ಟಿಕೆಟ್ ತಪ್ಪಿಸುವುದು ಬೇಡ ಎಂಬ ಬೇಡಿಕೆಯನ್ನು ಬಿಜೆಪಿ ವರಿಷ್ಠರ ಮುಂದಿಡಲಾಗಿತ್ತು.
ಅಳೆದು-ತೂಗಿ ಕ್ಷೇತ್ರ ಬಿಟ್ಟುಕೊಡಲು ಒಪ್ಪಿರುವ ಬಿಜೆಪಿಯು ಇ.ಸಿ. ನಿಂಗರಾಜು ಅವರ ಹೆಸರನ್ನು ತಡೆಹಿಡಿದಿದೆ. ಇತ್ತ ಜೆಡಿಎಸ್ ತನ್ನ ಅಭ್ಯರ್ಥಿ ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಶ್ರೀಕಂಠೇಗೌಡ ಮಾತ್ರವಲ್ಲದೆ, ವಿವೇಕಾನಂದ ಕೂಡ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಹಿಂದೆ ಶ್ರೀಕಂಠೇಗೌಡರು ಒಮ್ಮೆ ಗೆದ್ದು ಆಧಿಪತ್ಯ ಸ್ಥಾಪಿಸಿದ್ದರಿಂದ ಬಹುತೇಕ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆಗಳಿವೆ.
ಕೇಂದ್ರದ ನಾಯಕರು ಮೇಲ್ಮನೆ ಚುನಾವಣೆ ಬಗ್ಗೆ ಒಂದು ತಿಂಗಳಿನಿಂದಲೇ ವರದಿ ಪಡೆದಿದ್ದಾರೆ. ಚರ್ಚೆ ಮಾಡಿ, ಜೆಡಿಎಸ್ ಜತೆ ಹೊಂದಾಣಿಕ ಆಗಿರುವುದರಿಂದ ನಮಗೆ ಸೀಟು ಕಡಿಮೆ ಆಗಿದೆ. ಹೊಂದಾಣಿಕೆ ದೃಷ್ಟಿಯಿಂದ ಕೇಂದ್ರದ ನಾಯಕರು ಘೋಷಿಸಿರುವುದು ಪಕ್ಷದ ತೀರ್ಮಾನ. ಒಟ್ಟಿಗೆ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಮಗೆ ಮೂವರ ಪಟ್ಟಿ ಕಳುಹಿಸಲು ಹೇಳಿದ್ದರು. ಅದರಂತೆ ಕಳುಹಿಸಿದ್ದೆವು. ಅವರು ಘೋಷಿಸಿದ್ದಾರೆ.
-ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ