ವಾರಾಣಸಿ(ಉತ್ತರಪ್ರದೇಶ): ಭಾರೀ ಭದ್ರತೆಯೊಂದಿಗೆ ಉತ್ತರಪ್ರದೇಶದ ವಾರಾಣಸಿಯಲ್ಲಿನ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶನಿವಾರ ವಿಡಿಯೋ ಚಿತ್ರೀಕರಣದ ಸಮೀಕ್ಷೆ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:30ವರ್ಷ ಶಿಕ್ಷಕ ವೃತ್ತಿ…60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಆರೋಪಿ ಸೆರೆ
ಸ್ಥಳೀಯ ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇಗುಲದ ವಿಡಿಯೋ ಸಮೀಕ್ಷೆ ನಡೆಸಲು ಆಗಮಿಸುವ ತಂಡದ ಜೊತೆ ಸಹಕರಿಸುವುದಾಗಿ ಮಸೀದಿಯ ಆಡಳಿತ ಮಂಡಳಿ ಹೇಳಿದೆ.
ಅರ್ಜಿದಾರರು, ಮಸೀದಿ ಆಡಳಿತ ಮಂಡಳಿ ಸದಸ್ಯರು, ಅವರ ವಕೀಲರು, ನ್ಯಾಯಾಲಯದ ಕಮಿಷನರ್ ಗಳು ಮತ್ತು ವಿಡಿಯೋಗ್ರಾಫರ್ ಗಳು ಸ್ಥಳಕ್ಕೆ ತಲುಪಿದ್ದು, ಸಮೀಕ್ಷೆ ಆರಂಭಿಸಿರುವುದಾಗಿ ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ಮಂದಿರದ ಸಮೀಪದಲ್ಲೇ ಇರುವ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿರುವ ಹಿಂದೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಿ, ಜ್ಞಾನವಾಪಿ ದೇಗುಲದ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸುವಂತೆ ಆದೇಶ ನೀಡಿತ್ತು.
ಕಮಿಷನರ್ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸಹಾಯಕವಾಗಲು ಇಬ್ಬರು ಹೆಚ್ಚುವರಿ ವಕೀಲರನ್ನು ಕೋರ್ಟ್ ನೇಮಕ ಮಾಡಿದ್ದು, ಮೇ 17ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿತ್ತು.
ಏತನ್ಮಧ್ಯೆ ವಾರಾಣಸಿ ಕೋರ್ಟ್ ಸಮೀಕ್ಷೆ ನಡೆಸುವಂತೆ ನೀಡಿದ ಆದೇಶದ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಜ್ಞಾನವಾಪಿ ಮಸೀದಿಸಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಹಾಗೂ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿತ್ತು. ಆದರೆ ಸುಪ್ರೀಂಕೋರ್ಟ್ ಈ ಬಗ್ಗೆ ನಮಗೇನೂ ಗೊತ್ತಿಲ್ಲ. ಹೀಗಿದ್ದಾಗ ಯಾವ ಆದೇಶ ಹೊರಡಿಸಲಿ? ನಂತರ ನೋಡೋಣ ಎಂದು ಹೇಳಿ ವಿಚಾರಣೆ ಮುಂದೂಡಿತ್ತು.