ಹೈದರಾಬಾದ್: ಇಲ್ಲಿನ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕಾನೂನು ವಿದ್ಯಾರ್ಥಿಯನ್ನು ಥಳಿಸಿ ಧರ್ಮ ಪರ ಘೋಷಣೆಗಳನ್ನು ಪಠಿಸಲು ಒತ್ತಾಯಿಸಿದ ವೀಡಿಯೊವೊಂದು ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಹೈದರಾಬಾದಿನ ಐಸಿಎಫ್‌ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ಐಎಫ್‌ಹೆಚ್‌ಇ)ಯಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಹಿಮಾಂಕ್ ಬನ್ಸಾಲ್ ಎಂಬಾತನಿಗೆ ಕಪಾಳಮೋಕ್ಷ ಮಾಡಿ, ಥಳಿಸಿ, ಕೈಗಳನ್ನು ತಿರುಚಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಆರೋಪಿಗಳು ಆತನನ್ನು ಥಳಿಸುವುದನ್ನು ಮುಂದುವರೆಸಿದ್ದರಿಂದ ಆತ ಒತ್ತಾಯಪೂರ್ವಕವಾಗಿ “ಜೈ ಮಾತಾ ದಿ” ಮತ್ತು “ಅಲ್ಲಾಹು ಅಕ್ಬರ್” ಘೋಷಣೆಗಳನ್ನು ಕೂಗಿದ್ದಾನೆ.
“ನಾವು ಅವರ ಸಿದ್ಧಾಂತವನ್ನು ಸರಿಪಡಿಸಲು ಬಯಸುತ್ತೇವೆ. ನಾವು ಅವನನ್ನು ಕೋಮಾಕ್ಕೆ ಹೋಗುವವರೆಗೂ ಥಳಿಸುತ್ತೇವೆ” ಎಂದು ಆರೋಪಿಯೊಬ್ಬ ಹೇಳಿದ್ದಾನೆ. ಅವರಲ್ಲಿ ಒಬ್ಬ ಅವನ ಪರ್ಸ್ ಕಸಿದುಕೊಂಡು “ನಿಮಗೆ ಬೇಕಾದ ಎಲ್ಲಾ ಹಣವನ್ನು ತೆಗೆದುಕೊಳ್ಳಿ” ಎಂದು ಹೇಳಿದರು.
ಇದನ್ನೂ ಓದಿ:ಉದಯಪುರ ರೈಲ್ವೆ ಹಳಿ ಸ್ಫೋಟ: ಭಯೋತ್ಪಾದಕ ಕೃತ್ಯ ಎಂದ ರಾಜಸ್ಥಾನ ಪೊಲೀಸರು, ತನಿಖೆ ಚುರುಕು
12 ಮಂದಿಯಲ್ಲಿ ಓರ್ವ ಅಪ್ರಾಪ್ತ ವಯಸ್ಕ ಸೇರಿ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಇವರೆಲ್ಲರನ್ನೂ ಬಿಸಿನೆಸ್ ಸ್ಕೂಲ್ ಅಮಾನತುಗೊಳಿಸಿದೆ. ಕಾಲೇಜಿನ ಆಡಳಿತ ಮಂಡಳಿಯ ಐವರಿಗೆ ಪೊಲೀಸರೆದುರು ಹಾಜರಾಗುವಂತೆ ಆದೇಶ ನೀಡಲಾಗಿದೆ.
ಈ ಘಟನೆ ನವೆಂಬರ್ 1ರಂದು ನಡೆದಿದೆ. ಪ್ರವಾದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಿಮಾಂಕ್ ಅವಹೇಳನಕಾರಿ ಹೇಳಿಕೆ ನೀಡಿದ್ದ. ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಹಿಮಾಂಕ್ ಪೊಲೀಸರ ಠಾಣೆಯಲ್ಲಿ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಲಾಗಿದೆ.