ನವದೆಹಲಿ: ಇತ್ತೀಚೆಗೆ ನಡೆದ ಸಾಮೂಹಿಕ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್ ಗೌತಮ್ ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿ ತಾವು ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿರುವ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ಇದು ಬಿಜೆಪಿ ಮತ್ತು ಆಪ್ ನಡುವೆ ಜಟಾಪಟಿಗೆ ಕಾರಣವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:21 ವರ್ಷಗಳ ಹಿಂದೆ ಸಿಎಂ ಆಗಿ ಮೊದಲ ಬಾರಿ ಮೋದಿ ಪ್ರಮಾಣ ವಚನ ಸ್ವೀಕಾರ
1956ರ ಅಕ್ಟೋಬರ್ ನಲ್ಲಿ ಡಾ.ಬಿಆರ್ ಅಂಬೇಡ್ಕರ್ ಅವರು ತಮ್ಮ ಸಾವಿರಾರು ಮಂದಿ ಅನುಯಾಯಿಗಳ ಜತೆಗೂಡಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಪ್ರತಿ ವರ್ಷ ಧರ್ಮಚಕ್ರ ಪ್ರವರ್ತನ್ ದಿನವನ್ನಾಗಿ ಆಚರಿಸಿ ಸಾಮೂಹಿಕ ಮತಾಂತರ ಕಾರ್ಯಕ್ರಮ ನಡೆಸಲಾಗುತ್ತಿದೆ.
ಮುಂಬೈನಲ್ಲಿ ಅಕ್ಟೋಬರ್ 5ರಂದು ನಡೆದ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಆಪ್ ಸಚಿವ ಸೇರಿದಂತೆ ಸಾವಿರ ಮಂದಿ ಭಾಗವಹಿಸಿದ್ದು, ನಮಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಲ್ಲಿ ನಂಬಿಕೆ ಇಲ್ಲ. ಅವರನ್ನು ಪೂಜಿಸುವುದಿಲ್ಲ ಎಂದು ಪ್ರತಿಜ್ಞೆ ಕೈಗೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಕಾರ್ಯಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷ, ಇದು ಹಿಂದೂ ಮತ್ತು ಬೌದ್ಧ ಧರ್ಮಕ್ಕೆ ಮಾಡಿದ ಅಪಮಾನ ಎಂದು ತಿಳಿಸಿದೆ. ಆಮ್ ಆದ್ಮಿ ಪಕ್ಷದ ಸಚಿವರು ಗಲಭೆ ನಡೆಯಲು ಸಂಚು ನಡೆಸಿರುವುದಾಗಿ ಬಿಜೆಪಿ ದೂರಿದ್ದು, ಕೂಡಲೇ ಸಚಿವ ಗೌತಮ್ ಅವರನ್ನು ಸಚಿವ ಸ್ಥಾನದಿಂದ ಆಪ್ ವಜಾಗೊಳಿಸಲಿ ಎಂದು ಒತ್ತಾಯಿಸಿದೆ.