Advertisement
ಉಡುಪಿ ಜಿ.ಪಂ. ಸಭಾಂಗಣ, ತೆಕ್ಕಟ್ಟೆ ಗ್ರಾ.ಪಂ., ಕೋಣಿ ಗ್ರಾ.ಪಂ., ಗೋಪಾಡಿ ಗ್ರಾ.ಪಂ.; ದಕ್ಷಿಣ ಕನ್ನಡದ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಸ್ವ.ಸ. ಸಂಘಗಳ ಸದಸ್ಯೆಯರು ಸಂವಾದವನ್ನು ವೀಕ್ಷಿಸಿದರು. ಉಡುಪಿ ಜಿ.ಪಂ. ಸಭಾಂಗಣದಲ್ಲಿ ಮೂರು ಪರದೆಗಳಲ್ಲಿ ಪ್ರಸಾರ ವ್ಯವಸ್ಥೆ ಮಾಡಲಾಗಿದ್ದು, 60ಕ್ಕೂ ಅಧಿಕ ಸದಸ್ಯೆಯರು ಪಾಲ್ಗೊಂಡಿದ್ದರು. ಪುತ್ತೂರಿನಲ್ಲಿ ಕೃಷ್ಣನಗರ ಎಂಎಸ್‌ಎಸ್‌ಎಸ್ ಕಿಡ್ಸ್‌ನ ಸುಮಾರು 50 ಮಂದಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯ ಫಲಾನುಭವಿಗಳು ಪಾಲ್ಗೊಂಡರು. ಕಾಸರಗೋಡು ಮತ್ತು ಬದಿಯಡ್ಕ ಭಾಗದಲ್ಲಿಯೂ ಸ್ವ.ಸ. ಸಂಘಗಳ ಸದಸ್ಯೆಯರು ಸಂವಾದ ವೀಕ್ಷಿಸಿದರು.
ಸಂವಾದ ವೀಕ್ಷಿಸಿದ ಅನಂತರ ಪ್ರತಿಕ್ರಿಯಿಸಿದ ಉಡುಪಿಯ ಸ್ವ.ಸ. ಸಂಘವೊಂದರ ಸದಸ್ಯೆ ಜ್ಯೋತಿ, ಸಂವಾದ ನೋಡಿ ಖುಷಿಯಾಗಿದ್ದು, ಸ್ಫೂರ್ತಿ ತುಂಬಿದೆ ಎಂದರು. ಶ್ಯಾಮಲಾ ಕುಂದರ್, ಸ್ವ ಸಹಾಯ ಗುಂಪುಗಳ ಮೂಲಕ ದೇಶದ ನಾನಾ ಕಡೆಗಳ ಮಹಿಳೆಯರು ಹೇಗೆ ಯಶಸ್ವಿಯಾಗಿದ್ದಾರೆ ಎಂಬುದು ತಿಳಿಯುವಂತಾಯಿತು ಎಂದರು.
ಗ್ರಾಮೀಣ ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಬದುಕಲು ಸ್ವಸಹಾಯ ಸಂಘಗಳು ಅವಕಾಶ ಮಾಡಿಕೊಟ್ಟಿವೆ. ಮೋದಿಯವರು ಇಂತಹ ಸಂವಾದ ನಡೆಸುವ ಮೂಲಕ ಮತ್ತಷ್ಟು ಆತ್ಮಸ್ಥೈರ್ಯ, ಸ್ಫೂರ್ತಿ ತುಂಬಿದಂತಾಗಿದೆ ಎಂದು 80 ಬಡಗಬೆಟ್ಟು ಆದರ್ಶನಗರ ಸ್ತ್ರೀ ಶಕ್ತಿ ಗುಂಪಿನ ನೀರಜಾ ಉದಯ ಕುಮಾರ್ ಶೆಟ್ಟಿ ಹೇಳಿದರು. ಬಿಹಾರದ ವಿಧವೆ ಅಮೃತಾದೇವಿ ಸೊದ್ಯೋಗದ ಮೂಲಕ ಮಾಡಿದ ಸಾಧನೆ, ಛತ್ತೀಸ್‌ಗಢದ 12 ಮಂದಿ ಮಹಿಳೆಯರು ಸೇರಿ ಇಟ್ಟಿಗೆ ತಯಾರಿಕೆಯ ಮೂಲಕ ಯಶಸ್ಸು ಸಾಧಿಸಿರುವುದು ಮೊದಲಾದ ಯಶೋಗಾಥೆಗಳು ನಮ್ಮಲ್ಲಿ ಸ್ಫೂ³ರ್ತಿ ತುಂಬಿದವು ಎಂದು ಹಲವು ಮಂದಿ ಮಹಿಳೆಯರು ಅಭಿಪ್ರಾಯ ಹಂಚಿಕೊಂಡರು. ವ್ಯರ್ಥವಾದ ಸಂವಾದ?
ಎಡಪದವು: ನರೇಂದ್ರ ಮೋದಿಯವರು ನೇರ ಸಂವಾದ ಕಾರ್ಯಕ್ರಮ ಇಲ್ಲಿನ ಮಹಿಳೆಯರಿಗೆ ಹಿಂದಿ ಬಾರದ ಕಾರಣ ವ್ಯರ್ಥವಾದಂತಾಗಿದೆ. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯಿಂದ ಗುರುವಾರ ಸಂವಾದ ಕಾರ್ಯಕ್ರಮದ ವೀಕ್ಷಣೆ ವ್ಯವಸ್ಥೆಯನ್ನು ಆಯಾಯ ಪಂ. ವ್ಯಾಪ್ತಿಯಲ್ಲಿ ಮಾಡಲಾಗಿತ್ತು. ಆದರೆ ಮೋದಿ ಹಿಂದಿಯಲ್ಲಿ ಮಾತನಾಡಿರುವುದು ಏನೆಂದು ಅರ್ಥವಾಗಲಿಲ್ಲ. ಕುಪ್ಪೆಪದವು ಭಜನಾ ಮಂದಿರದಲ್ಲಿ ಸುಮಾರು 40 ಮಂದಿ ಮಹಿಳೆಯರು ಭಾಗವಹಿಸಿದ್ದರು. ಚಿಕ್ಕ ಟಿ.ವಿ. ಅಳವಡಿಸಿದ್ದು, ಹೆಚ್ಚಿನವರಿಗೆ ಏನೂ ಅರ್ಥವಾಗಲಿಲ್ಲ.