Advertisement

ವಿಡಿಯೋ ತುಣುಕು: ಬಿಜೆಪಿಯಲ್ಲಿ ಗೊಂದಲ

11:15 PM Nov 03, 2019 | Lakshmi GovindaRaju |

ಬೆಂಗಳೂರು: ಅನರ್ಹಗೊಂಡಿರುವ ಶಾಸಕರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕುರಿತಾಗಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ತುಣುಕು ಬಿಜೆಪಿ ವಲಯದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ.

Advertisement

ವಿಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು ಯಡಿಯೂರಪ್ಪ ಅವರು ಶನಿವಾರ ಒಪ್ಪಿಕೊಂಡಿದ್ದರು. ಭಾನುವಾರ ತಮ್ಮ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ತಿರುಚಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹರ ಪ್ರಕರಣವನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ರೀತಿಯಲ್ಲಿ ಕಾಂಗ್ರೆಸ್‌ನವರು ತಿರುಚಿದ್ದಾರೆ ಎಂದು ಮುಖ್ಯಮಂತ್ರಿಗಳು ಭಿನ್ನ ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪ ಅವರ ವಿಡಿಯೋ ಪ್ರಕರಣವು ಕೇಂದ್ರ ನಾಯಕರ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಹೀಗಾಗಿಯೇ ಇದನ್ನು ಶಮನ ಮಾಡಲು ಮತ್ತು ಕಾಂಗ್ರೆಸ್‌ಗೆ ಇದು ಅಸ್ತ್ರವಾಗದೇ ಇರಲು ನೋಡಿಕೊಳ್ಳಲು ಬಿಜೆಪಿ ಮುಖಂಡರು ಎಲ್ಲ ರೀತಿಯ ಪ್ರತಿತಂತ್ರ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಮೊದಲಾದವರು ಈ ಕುರಿತು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಶೆಗೆ ಒಳಗಾಗಿರುವ ಕಾಂಗ್ರೆಸ್‌ ನಾಯಕರು ಈ ರೀತಿಯ ಆಪಾದನೆ ಮಾಡುತ್ತಿದ್ದಾರೆ. ಇದರ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ಒಟ್ಟಾರೆ ಯಡಿಯೂರಪ್ಪ ವಿಡಿಯೋ ಪ್ರಕರಣ ಬಿಜೆಪಿ ವಲಯದಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಅಲ್ಲದೆ, ತಮ್ಮ ಪಕ್ಷದಲ್ಲೇ ಇರುವ ಕೆಲವರನ್ನು ಉದ್ದೇಶಿಸಿ, ಈ ರೀತಿಯ ಹೇಳಿಕೆಯನ್ನು ಬಿಎಸ್‌ವೈ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಅನರ್ಹಗೊಂಡಿರುವ ಶಾಸಕರು ಬಿಜೆಪಿಗೆ ಬರುವುದು ಮತ್ತು ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ನೀಡಲು ದಿನೇದಿನೆ ಒತ್ತಡ ಹೆಚ್ಚುತ್ತಿದೆ.

Advertisement

ಹಾಗೆಯೇ ಅನರ್ಹಗೊಂಡಿರುವ ಶಾಸಕರು ಬಿಜೆಪಿಗೆ ಬರುವುದು ಬೇಡ, ಅವರಿಗೆ ಟಿಕೆಟ್‌ ನೀಡಿದಲ್ಲಿ, ಉಪಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡರಲ್ಲಿ ಕೆಲವು ಪಟ್ಟು ಹಿಡಿದಿದ್ದಾರೆ. ಅನರ್ಹ ಶಾಸಕರ ಪರ ಹಾಗೂ ವಿರುದ್ಧವಾದ ಧ್ವನಿ ಬಿಜೆಪಿ ವಲಯದಲ್ಲಿ ಗಟ್ಟಿಯಾಗಿರುವುದರಿಂದ ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲು ಆಗದೇ, ಅವರಿಗೆ ಉಪಚುನಾವಣೆಯಲ್ಲಿ ಸುಲಭದಲ್ಲಿ ಸೀಟು ನೀಡಲೂ ಆಗದ ಕಠಿಣ ಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದಾರೆ ಎನ್ನಲಾಗಿದೆ.

ಪಕ್ಷದ ಕೆಲವು ಮುಖಂಡರೇ ತಮಗೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿಯ ಮಾತುಗಳನ್ನು ಆಡಿದ್ದಾರೆ ಎಂದೂ ಹೇಳಾಗುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣವು ಬಿಜೆಪಿಯಲ್ಲೇ ಹಲವು ರೀತಿಯ ಗೊಂದಲ ಮೂಡಿಸಿದ್ದು, ಸಚಿವರು ಸಹಿತವಾಗಿ ಕೆಲವು ನಾಯಕರು ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ಪ್ರಕರಣದಿಂದ ಪಾರು ಮಾಡಲು ಮತ್ತು ಸಮರ್ಥಿಸಿಕೊಳ್ಳಲು ಬೇಕಾದ ತಂತ್ರಗಾರಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ತಿರುಗೇಟು
ಬೀದರ: “ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಕ್ಲಿಪ್‌ನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಿಡುಗಡೆ ಮಾಡಿಸಿರಬೇಕು’ ಎಂಬ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ವಿಡಿಯೋ ರೆಕಾರ್ಡ್‌ ಮಾಡಲು ನಾನು ಏನಾದರೂ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಇದ್ದೆನಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next