ಲಕ್ನೋ: ಕೆಲವರು ಸೆಲೂನ್ ಶಾಪ್ ಗೆ ಹೋದರೆ ಹೇರ್ ಕಟ್ ಜೊತೆ ಮಸಾಜ್ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕ್ಷೌರಿಕ ಮಸಾಜ್ ಮಾಡುವ ನೆಪದಲ್ಲಿ ಮಾಡಿದ ಕೃತ್ಯವನ್ನು ನೋಡಿದರೆ ಇನ್ಮುಂದೆ ಮಸಾಜ್ ಮಾಡಿಕೊಳ್ಳುವ ಮುನ್ನ ಒಂದು ಬಾರಿ ಯೋಚಿಸಬೇಕು.!
ಗ್ರಾಹಕನೊಬ್ಬ ಸೆಲೂನ್‌ಗೆ ತೆರಳಿ ಫೇಸ್ ಮಸಾಜ್ ಮಾಡುವಂತೆ ಹೇಳಿದ್ದಾನೆ. ಗ್ರಾಹಕನ ಕೋರಿಕೆಯಂತೆ ಕ್ಷೌರಿಕ ಝೈದ್ ಎನ್ನುವಾತ ಮಸಾಜ್ ಮಾಡಲು ಆರಂಭಿಸಿದ್ದಾನೆ. ಗ್ರಾಹಕ ಮಸಾಜ್ ನಿಂದ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾನೆ. ಆದರೆ ಮಸಾಜ್ ಬೇಕಾಗುವ ಕ್ರೀಮ್ ಬಳಸಿದ ಬಳಿಕ ಕ್ಷೌರಿಕ ತನ್ನ ಕೈಗೆ ಎಂಜಲು ಉಗುಳಿಕೊಂಡು ಗ್ರಾಹಕನಿಗೆ ಅದರಿಂದ ಮಸಾಜ್ ಮಾಡಿದ್ದಾನೆ.
ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು,ಗ್ರಾಹಕನಿಗೆ ಮೊದಲಿಗೆ ಇದು ಗಮನಕ್ಕೆ ಬಂದಿಲ್ಲ. ಆ ಬಳಿಕ ಸಂಶಯಗೊಂಡು ಸೆಲೂನ್‌ನಲ್ಲಿದ್ದ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ ಕ್ಷೌರಿಕನ ಕೃತ್ಯ ಬೆಳಕಿಗೆ ಬಂದಿದೆ.
ಕ್ಷೌರಿಕ ತನ್ನ ಕೈಗೆ ಉಗುಳುವುದು ಮತ್ತು ಮುಖಕ್ಕೆ ಮಸಾಜ್ ಮಾಡಲು ಎಂಜಲನ್ನು ಬಳಸುವುದನ್ನು ಕಂಡು ಶಾಕ್ ಆದ ಗ್ರಾಹಕ ಪೊಲೀಸರಿಗೆ ದೂರು ನೀಡಿದ್ದಾನೆ.
ಗ್ರಾಹಕರ ದೂರಿನ ಆಧಾರದ ಮೇಲೆ ಲಕ್ನೋ ಪೊಲೀಸರು ಜೈದ್‌ನನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.