ಮುಂಬೈ: T20 ವಿಶ್ವಕಪ್ ವಿಜೇತ್ ಭಾರತ ಕ್ರಿಕೆಟ್ ತಂಡಕ್ಕೆ ಗುರುವಾರ ಸಂಜೆ ಮುಂಬೈನಲ್ಲಿ ಅದ್ದೂರಿ ಸ್ವಾಗತ ನೀಡಿ ವಿಕ್ಟರಿ ಪರೇಡ್ ನಡೆಸಿದ ಬಳಿಕ ರಸ್ತೆಗಳಲ್ಲಿ ಭಾರೀ ಪ್ರಮಾಣದ ಕಸ ಕಂಡು ಬಂದಿದೆ.
ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ವೀರೋಚಿತ ಸ್ವಾಗತ ನೀಡಲು ಮುಂಬೈನ ಐಕಾನಿಕ್ ಮರೀನಾ ಡ್ರೈವ್ ಸಮುದ್ರ ತೀರದ ರಸ್ತೆಗಳಲ್ಲಿ ಬಹುಸಂಖ್ಯೆಯ ಜನರು ನೀರಿನ ಬಾಟಲಿಗಳು ಮತ್ತು ಪಾದರಕ್ಷೆಗಳನ್ನು ಒಳಗೊಂಡಂತೆ ಕಸವನ್ನು ಎಸೆದು ಹೋಗಿದ್ದು, ನಂತರ ಅದನ್ನು ನಾಗರಿಕ ಸಂಸ್ಥೆ ಏಳು ವಾಹನಗಳಲ್ಲಿ ಸಂಗ್ರಹಿಸಿ ಸ್ವಚ್ಛ ಕಾರ್ಯ ನಡೆಸಿದೆ.
ವಿಜಯೋತ್ಸವದ ಮೆರವಣಿಗೆಯ ನಂತರ ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಶುಕ್ರವಾರ ತಿಳಿಸಿದೆ.
ಗುರುವಾರ ಸಂಜೆ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವದ ಮೆರವಣಿಗೆಯನ್ನು ವೀಕ್ಷಿಸಲು ದಕ್ಷಿಣ ಮುಂಬೈನ ಮರೀನಾ ಡ್ರೈವ್‌ನಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (NCPA) ನಿಂದ ರಾತ್ರಿ 7.30 ರ ನಂತರ ತೆರೆದ ಬಸ್ ಮೆರವಣಿಗೆಯು ವಾಂಖೆಡೆ ಕ್ರೀಡಾಂಗಣದವರೆಗೆ ನಡೆಯಿತು. ಈ ಎರಡು ಸ್ಥಳಗಳ ಅಂತರವನ್ನು ಕ್ರಮಿಸಲು ಸಾಮಾನ್ಯವಾಗಿ ಐದು ನಿಮಿಷ ಸಾಕಾಗುತ್ತದೆಯಾದರೂ, ಭಾರೀ ಜನದಟ್ಟಣೆಯಿಂದಾಗಿ ಮೆರವಣಿಗೆ ತಲುಪಲು ಒಂದೂವರೆ ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡಿತು.
ಸ್ವಚ್ಛತಾ ಅಭಿಯಾನದ ವೇಳೆ ಹೆಚ್ಚಿನ ಸಂಖ್ಯೆಯ ಆಹಾರ ಪದಾರ್ಥಗಳ ಪ್ಲಾಸ್ಟಿಕ್ ಗಳು, ನೀರಿನ ಬಾಟಲಿಗಳು ಹೊದಿಕೆಗಳ ಜತೆಗೆ ಹೆಚ್ಚಿನ ಪ್ರಮಾಣದ ಶೂಗಳು ಮತ್ತು ಚಪ್ಪಲಿಗಳನ್ನು ಸಂಗ್ರಹಿಸಲಾಗಿದೆ. ಒಟ್ಟು ಕಸದ ಪೈಕಿ ಶೂಗಳು ಮತ್ತು ಚಪ್ಪಲ್‌ಗಳನ್ನು ಐದು ಜೀಪ್‌ಗಳಲ್ಲಿ ಸಂಗ್ರಹಿಸಲಾಗಿದೆ, ಎರಡು ಡಂಪರ್‌ಗಳನ್ನು ಸಹ ಸ್ಥಳದಿಂದ ಕಸ ಎತ್ತಲು ಬಳಸಲಾಗಿದೆ ಎಂದು BMC ಹೇಳಿದೆ.
ಭಾರೀ ಭದ್ರತೆಯ ನಡುವೆಯೂ ಮೆರವಣಿಗೆ ವೇಳೆ ನೂಕು ನುಗ್ಗಲಿನ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಹಲವಾರು ಪಾದರಕ್ಷೆಗಳನ್ನು ಕಾಲುಗಳಿಂದ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.