ರಬಕವಿ-ಬನಹಟ್ಟಿ: 2018-19 ರಲ್ಲಿ ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ 1628 ಜನ ರೈತ ಫಲಾನುಭವಿಗಳಿಗೆ ಅಂದಾಜು ರೂ. 20 ಕೋಟಿ ಹಣ ಇದೀಗ ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗಲಿದ್ದು, ಇದು ಮೂರು ವರ್ಷಗಳಿಂದ ಕಬ್ಬು ಪೂರೈಸಿದ ರೈತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶನಿವಾರ ರಬಕವಿಯ ಜಿಎಲ್‌ಬಿಸಿ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗೆ ತೊಂದರೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಬಿಜೆಪಿ ಸರ್ಕಾರ ರೈತರ ಪರವಾಗಿರುವ ಸರ್ಕಾರವಾಗಿದೆ. ಮುಂದಿನ ದಿನಗಳಲ್ಲಿ ತೇರದಾಳ ಸಾವರಿನ್ ಸಕ್ಕರೆ ಕಾರ್ಖಾನೆಯನ್ನು ನಡೆಸಲು ಸಮರ್ಥವಾಗಿರುವವರಿಗೆ ನೀಡುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುವುದು ಎಂದು ಶಾಸಕ ಸವದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ದೊರೆಯುತ್ತಿಲ್ಲ. ಆದ್ದರಿಂದ ಈ ಕುರಿತು ಎಲ್ಲ ಶಾಸಕರು ವಿಧಾನ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರೆತರೆ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಾಧರ ಮೇಟಿ, ಹೊನ್ನಪ್ಪ ಬಿರಡಿ ಮಾತನಾಡಿದರು. ವೇದಿಕೆಯ ಮೇಲೆ ಜಮಖಂಡಿ ಉಪ ವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್ ಎಸ್.ಬಿ.ಇಂಗಳೆ, ಬಾಗಲಕೋಟೆ ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸುಭಾಸ ಶಿರಗೂರ, ಶ್ರೀಕಾಂತ ಘೂಳನ್ನವರ, ಕರಿಗೌಡರ, ಲಕ್ಷ್ಮಣ ಬ್ಯಾಳಿ, ಬಾಬಾಗೌಡ ಪಾಟೀಲ, ಅಶೋಕ ದೇಸಾಯಿ ಇದ್ದರು.
ರೈತ ಮುಖಂಡ ಬಂಡು ಪಕಾಲಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ, ಜಮಖಂಡಿ, ಮುಧೋಳ ಹಾಗೂ ನೆರೆಯ ಅಥಣಿ ತಾಲ್ಲೂಕಿನ ಕಬ್ಬು ಪೂರೈಸಿದ ರೈತರು ಇದ್ದರು.