Advertisement

ವಿಜಯೋತ್ಸವ: ಏಕಾಂಗಿ ಸಂಚಾರಿಯ ಹೊಸ ವರ್ತಮಾನ

12:55 PM Oct 04, 2017 | Team Udayavani |

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಇನ್ಯಾವುದೋ ಪ್ರಶಸ್ತಿ ಮುಡಿಗೇರಿಸಿಕೊಂಡುಬಿಟ್ಟರಾ ಎಂಬ ಪ್ರಶ್ನೆ ಎದುರಾಗೋದು ಸಹಜ. ಆದರೆ, ಇದು ಪ್ರಶಸ್ತಿ ವಿಷಯ ಅಲ್ಲ. ಸಿನಿಮಾ ವಿಷಯ. ಹೌದು, ಸಂಚಾರಿ ವಿಜಯ್‌ ಈಗ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಎಷ್ಟರಮಟ್ಟಿಗೆ ಅಂದರೆ, ಒಂದು ದಿನವೂ ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಷ್ಟು. ಸಂಚಾರಿ ವಿಜಯ್‌ ಕೈಯಲ್ಲಿ ಈಗ ಒಂದಲ್ಲ, ಎರಡಲ್ಲ, ಮೂರಲ್ಲ, ಬರೋಬ್ಬರಿ ಒಂಭತ್ತು ಚಿತ್ರಗಳಿವೆ! ಬಪ್ಪರೆ, ನಿಜಕ್ಕೂ ಇ‌ು ಅಚ್ಚರಿ ಪಡುವಂತಹ ವಿಷಯವೇ. ಆ ಪೈಕಿ ಈ ವರ್ಷ ಏನಿಲ್ಲವೆಂದರೂ ನಾಲ್ಕು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

ಸಂಚಾರಿ ವಿಜಯ್‌ ಅವರು “ನನ್‌ ಮಗಳೇ ಹೀರೋಯಿನ್‌’, “ಕೃಷ್ಣ ತುಳಸಿ’, “ಪಾದರಸ’, “ವರ್ತಮಾನ’, “ಪಿರಂಗಿಪುರ’, “ಮೇಲೊಬ್ಬ ಮಾಯಾವಿ’, “ವರ್ತಮಾನ’, “ತಲೆದಂಡ’ ಹಾಗೂ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಚಿತ್ರಗಳಲ್ಲಿ  ನಟಿಸುತ್ತಿದ್ದಾರೆ. ಆ ಪೈಕಿ ಈಗ “ನನ್‌ ಮಗಳೇ ಹೀರೋಯಿನ್‌’ ಚಿತ್ರ ಸೆನ್ಸಾರ್‌ಗೆ ಹೋಗಿದ್ದು, ಆಗಸ್ಟ್‌ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. “ಕೃಷ್ಣ ತುಳಸಿ’ ಸದ್ಯಕ್ಕೆ ಡಿಐ ಹಂತದಲ್ಲಿದೆ. “ವರ್ತಮಾನ’ ಕೂಡ ಅಂತಿಮ ಹಂತದಲ್ಲಿದೆ. “ಪಾದರಸ’ ಶೇ.70 ರಷ್ಟು ಚಿತ್ರೀಕರಣವಾಗಿದೆ. ಈ ವರ್ಷ ಈ ನಾಲ್ಕು ಚಿತ್ರಗಳು ಬಿಡುಗಡೆಯಾಗಲಿವೆ.

ಅವರೀಗ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ಮಯೂರಿ ನಾಯಕಿಯಾಗಿದ್ದರೆ, ರಾಮಚಂದ್ರ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ “ತಲೆದಂಡ’, “ಆರನೇ ಮೈಲಿ’ ಎಂಬ ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ. ಇನ್ನೊಂದು ಹೊಸ ಸುದ್ದಿಯೆಂದರೆ, ಹಿರಿಯ ನಿರ್ದೇಶಕ ಭಗವಾನ್‌ ಅವರ ನಿರ್ದೇಶನದ ಚಿತ್ರವೊಂದರಲ್ಲೂ ನಟಿಸಲು ಒಪ್ಪಿಗೆ ಕೊಟ್ಟಿದ್ದಾರೆ. ಅಲ್ಲಿಗೆ ಸಂಚಾರಿ ವಿಜಯ್‌ ಕೈಯಲ್ಲಿ ಹತ್ತು ಚಿತ್ರಗಳಿವೆ.

ಇನ್ನು, ಈಗಾಗಲೇ ಪೋಸ್ಟರ್‌ ಮೂಲಕವೇ ಕನ್ನಡದಲ್ಲಿ ಹೊಸ ಸಂಚಲನ ಮೂಡಿಸಿದ “ಪಿರಂಗಿಪುರ’ ಚಿತ್ರಕ್ಕೆ ತಯಾರಿ ನಡೆಯುತ್ತಿದೆ. ಇಷ್ಟರಲ್ಲೇ ಚಿತ್ರೀಕರಣಕ್ಕೆ ತಂಡ ಹೊರಡಲಿದೆ. ಇಷ್ಟೊಂದು ಚಿತ್ರಗಳನ್ನು ಸಂಚಾರಿ ವಿಜಯ್‌ ಹೇಗೆ ಮ್ಯಾನೇಜ್‌ ಮಾಡ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಒಂದೇ ಹಂತದಲ್ಲಿ ಎರಡು, ಅಥವಾ ಮೂರು ತಿಂಗಳೊಳಗೆ ಒಂದೊಂದು ಸಿನಿಮಾ ಮುಗಿಸಿ, ಅದರ ಡಬ್ಬಿಂಗ್‌ ಕೆಲಸ ಮುಗಿಸಿಕೊಂಡು ಬೇರೊಂದು ಚಿತ್ರದ ಚಿತ್ರೀಕರಣಕ್ಕೆ ಅಣಿಯಾಗುತ್ತಾರೆ. ಅಂದಹಾಗೆ, ಸಂಚಾರಿ ವಿಜಯ್‌ ಅವರನ್ನು ಹುಡುಕಿ ಬರುವ ಚಿತ್ರಗಳು ಕಮರ್ಷಿಯಲ್‌ ಸಿನಿಮಾಗಳೇ, ಅಥವಾ ಕಲಾತ್ಮಕ ಚಿತ್ರಗಳೇ? ಈ ಪ್ರಶ್ನೆಗೆ ಅವರಿಂದ ಬರುವ ಉತ್ತರ, ಕಮರ್ಷಿಯಲ್‌ ಅಥವಾ ಕಲಾತ್ಮಕ ಎಂಬುದು ಗೊತ್ತಿಲ್ಲ. ಸಿನಿಮಾ ಅನ್ನೋದಷ್ಟೇ ಗೊತ್ತು. ಆದರೆ, ಒಂದು ಸಿನಿಮಾ ಅಂದರೆ, ಹೀಗೇ ಇರಬೇಕು ಎಂಬ ಪಾರ್ಮುಲ ಇದೆ. ಆದರೆ, ನನಗೆ ಸಿಕ್ಕಿರುವ ಸಿನಿಮಾಗಳೆಲ್ಲವೂ ಕೆಲವು ಜಾನರ್‌ನ ಸಿನಿಮಾಗಳನ್ನು ಬ್ರೇಕ್‌ ಮಾಡುವಂತಹ ಸಿನಿಮಾಗಳು ಸಿಕ್ಕಿವೆ. ಹಾಗಂತ ಅವುಗಳೆಲ್ಲವೂ ಪ್ರಯೋಗಾತ್ಮಕ ಚಿತ್ರಗಳಾ? ಅದೂ ಗೊತ್ತಿಲ್ಲ. “ನನ್‌ ಮಗಳೇ ಹೀರೋಯಿನ್‌’, “ಕೃಷ್ಣ ತುಳಸಿ’,”ಆರನೇ ಮೈಲಿ’, “ಪಾದರಸ’ ಚಿತ್ರಗಳು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳು ಎಂಬುದು ಸಂಚಾರಿ ವಿಜಯ್‌ ಮಾತು.

“ಸದ್ಯಕ್ಕೆ ಹಿರಿಯ ನಿರ್ದೇಶಕ ಭಗವಾನ್‌ ಅವರೊಂದು ಕಥೆ ಹೇಳಿದ್ದಾರೆ. ಅದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಸಿನಿಮಾ. ಸುಮಾರು 27 ವರ್ಷಗಳ ಬಳಿಕ ನಿರ್ದೇಶನಕ್ಕೆ ಬರುತ್ತಿದ್ದಾರೆ. ಡಾ.ರಾಜ್‌ಕುಮಾರ್‌ ಅಂತಹ ಮೇರುನಟರು ನಟಿಸಿದ್ದ 39 ಚಿತ್ರಗಳನ್ನು ನಿರ್ದೇಶಿಸಿದವರು. ಅವರೆಲ್ಲರೂ ನಮಗೆ ಸ್ಫೂರ್ತಿ. ಅವರ ಜತೆಗೆ ಕೆಲಸ ಮಾಡುವ ಅವಕಾಶ ಖುಷಿ ಕೊಡುತ್ತಿದೆ. ಅವರು ಕಥೆ ಹೇಳಿದಾಗ, ಅದೇ ಉತ್ಸಾಹ, ಅದೇ ಹುಮ್ಮಸ್ಸು ಇದೆ. ಪ್ರತಿಯೊಂದು ದೃಶ್ಯವನ್ನೂ ವಿವರವಾಗಿ ಹೇಳಿ, ಒಂದೊಳ್ಳೆಯ ಸಿನಿಮಾವನ್ನೇ ತೋರಿಸಿದ್ದಾರೆ. ಆ ವಯಸ್ಸಲ್ಲೂ ಅವರಲ್ಲಿರುವ ಉತ್ಸಾಹ ಮತ್ತು ಮಾಡಿಕೊಂಡಿರುವ ಕಥೆ ಸಿನಿಮಾ ಮಾಡಲು ಉತ್ತೇಜಿಸಿದೆ. ಆದರೆ, ಈಗಲೇ ಆ ಸಿನಿಮಾ ಮಾಡಲು ಆಗುವುದಿಲ್ಲ. ಯಾಕೆಂದರೆ, ನಾನು ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳನ್ನು ಮುಗಿಸಿದ ಬಳಿಕ ಆ ಸಿನಿಮಾ ಮಾಡುತ್ತೇನೆ. ಆ ಬಗ್ಗೆ ಭಗವಾನ್‌ ಅವರಿಗೂ ಹೇಳಿದ್ದೇನೆ ಎನ್ನುತ್ತಾರೆ ವಿಜಯ್‌.

Advertisement

ಇನ್ನು, ಪರಭಾಷೆಯಿಂದಲೂ ವಿಜಯ್‌ಗೆ ಸಾಕಷ್ಟು ಅವಕಾಶಗಳು ಬಂದಿದ್ದುಂಟು. ಹಾಗಂತ ವಿಜಯ್‌ ಅತ್ತ ಕಣ್ಣಾಯಿಸಲಿಲ್ಲ. ತಮಿಳು ಹಾಗೂ ಮಲಯಾಳಂನಿಂದ ಅವಕಾಶ ಬಂದಿದ್ದರೂ, ಅವರು ಇಲ್ಲೇ ಬಿಜಿಯಾಗಿರುವಾಗ, ಅತ್ತ ಯಾಕೆ ಹೋಗಲಿ ಅನ್ನುತ್ತಾರೆ. ಎಲ್ಲರೂ ಪ್ರಯೋಗಾತ್ಮಕ ಚಿತ್ರಗಳನ್ನೇ ಹಿಡಿದು ಬರುತ್ತಾರೆ. ನನಗೆ ಯಾವ ಭಾಷೆ ಎಂಬುದು ಮುಖ್ಯವಲ್ಲ. ನಾನು ಎಲ್ಲೇ ಹೋದರೂ, ಏನಾದರೊಂದು ಹೊಸತನ್ನು ಕೊಡಬೇಕು ಎಂಬ ಆಸೆ. ಅದು ನಮ್ಮಲ್ಲೇ ಸಿಗುವಾಗ, ಬೇರೆ ಕಡೆ ಹೋಗುವ ಯೋಚನೆಯೇ ಇಲ್ಲ. ನನಗೆ ನಮ್ಮ ನೆಲ, ನಮ್ಮ ಜಾಗ ಇಷ್ಟ. ಇಲ್ಲೇ ಸೇಫ್ ಆಗಿದ್ದೇನೆ. ಈಗಂತೂ ಖುಷಿಯಾಗಿದ್ದೇನೆ. ಇದಕ್ಕಿಂತ ಸಂತಸ ಎಲ್ಲೂ ಇಲ್ಲ ಎಂದಷ್ಟೇ ಹೇಳುತ್ತಾರೆ ವಿಜಯ್‌.

Advertisement

Udayavani is now on Telegram. Click here to join our channel and stay updated with the latest news.

Next