Advertisement

ವಿಕ್ಟೋರಿಯಾಗೆ ಜಡ್ಜ್ ಭೇಟಿ, ಚಿಕಿತ್ಸೆ ಪರಿಶೀಲನೆ

04:35 PM Mar 20, 2022 | Team Udayavani |

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರಾಜ್ಯ ಕಾನೂನು ಸೇವಾ ಪ್ರಾಧಿ ಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಹೈ ಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶನಿವಾರ ವಿಕ್ಟೋ ರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಪರಿಶೀಲಿಸಿದರು.

Advertisement

ಆಸ್ಪತ್ರೆಯಲ್ಲಿ ಚಿಕಿತ್ಸೆ, ರೋಗಿಗಳಿಗೆ ನೀಡಲಾಗುವ ಸೌಲಭ್ಯಗಳು ವಿಶೇಷವಾಗಿ ಆ್ಯಸಿಡ್‌ ದಾಳಿಗೊಳಗಾದವರ ಚಿಕಿತ್ಸಾ ಸೌಲಭ್ಯಗಳ ಕುರಿತು ಪ್ರಾಧಿಕಾರಕ್ಕೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಅನಿರೀಕ್ಷಿತ ಭೇಟಿ ನೀಡಿದರು. ಈ ವೇಳೆ ವ್ಯವಸ್ಥೆ ಮತ್ತು ಚಿಕಿತ್ಸಾ ಸೌಲಭ್ಯ, ಸರ್ಕಾರದ ಯೋಜ ನೆಗಳ ಕುರಿತು ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಸಂಬಂಧಪಟ್ಟ ವೈದ್ಯರು, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು. ಸತತ 2 ತಾಸಿಗೂ ಹೆಚ್ಚು ಕಾಲ ಸೂಪರ್‌ ಸ್ಪೇಷಾಲಿಟಿ ಸಂಕೀರ್ಣದ ಪ್ರತಿ ವಿಭಾಗ, ಪ್ರತಿ ವಾರ್ಡ್‌ಗೆ ಭೇಟಿ ಕೊಟ್ಟು ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

ಪುಟ್ಟ ಮಕ್ಕಳ ಕಷ್ಟಕ್ಕೆ ಮರುಕ: ಮಕ್ಕಳು ಮತ್ತು ನವಜಾತ ಶಿಶುಗಳ ವಾರ್ಡ್‌ಗೆ ಭೇಟಿ ಕೊಟ್ಟ ನ್ಯಾಯಮೂರ್ತಿ ಬಿ. ವೀರಪ್ಪನ ವರು ಅಲ್ಲಿ ಪುಟ್ಟ ಮಕ್ಕಳು, ಹಸುಗೂಸುಗಳ ಕಷ್ಟ ನೋಡಿ ಮರುಕಪಟ್ಟರು.

ದೂರು ಕೊಡಲು ಆ್ಯಸಿಡ್‌ ದಾಳಿ ಸಂತ್ರಸ್ತೆ ಹಿಂದೇಟು!
ಆ್ಯಸಿಡ್‌ ದಾಳಿಗೊಳಗಾದ ಮತ್ತು ಸುಟ್ಟಗಾಯಗಳ ಚಿಕಿತ್ಸಾ ವಾರ್ಡ್‌ಗೆ ನ್ಯಾಯಮೂರ್ತಿಗಳು ಭೇಟಿ ನೀಡಿ ಆ್ಯಸಿಡ್‌ ದಾಳಿಗೆ ಒಳಗಾದ ಮಹಿಳೆಯ ಆರೋಗ್ಯ ವಿಚಾರಿಸಿದರು. ಏನಾಯಿತು, ಯಾರು ಮಾಡಿದರು ಎಂದು ನ್ಯಾಯಮೂರ್ತಿಗಳು ಕೇಳಿದರೆ, ಯಾರಂತ ಗೊತ್ತಿಲ್ಲ ಸ್ವಾಮಿ, ಗಾಳಿ ಬರುತ್ತೇ ಅಂತ ಕಿಟಕಿ ತೆಗೆದು ಮಲಗಿದ್ದೆ ಯಾರೋ ಹೊರಗಿನಿಂದ ಆ್ಯಸಿಡ್‌ ಹಾಕಿ ಹೋಗಿದ್ದಾರೆ ಎಂದರು. ಸತ್ಯ ಹೇಳಿದರೆ ಕಾನೂನಿನ ನೆರವು ಮತ್ತು ಆರ್ಥಿಕ ಪರಿಹಾರ ಸಿಗುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಹೇಳಿದರೂ ಆಕೆ ಏನನ್ನೂ ಹೇಳಿಲ್ಲ. ಸತ್ಯ ಹೇಳಿ ಧೈರ್ಯದಿಂದ ದೂರು ಕೊಟ್ಟರೆ ಪ್ರಾಧಿಕಾರ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಆದರೆ, ದೂರೇ ಕೊಡುವುದಿಲ್ಲ ಎಂದರೆ ಕಷ್ಟ ಎಂದ ನ್ಯಾಯಮೂರ್ತಿಗಳು, ಅದಾಗ್ಯೂ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಮಾತನಾಡುವಂತೆ ಅಲ್ಲಿದ್ದ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶೇ.80ರಷ್ಟು ಸುಟ್ಟ ಗಾಯದಲ್ಲೂ ಮಕ್ಕಳ ಚಿಂತೆ
ಸುಟ್ಟಗಾಯಗಳ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇ.80ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವ ಮಹಿಳೆ ಯನ್ನು ಭೇಟಿ ಮಾಡಿ ನ್ಯಾಯಮೂರ್ತಿಗಳು ಆರೋಗ್ಯ ವಿಚಾರಿಸಿದರು. ಗಂಡನೇ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಸಾಯಿಸಲು ಪ್ರಯತ್ನಿಸಿದ್ದಾನೆ. ಗಂಡನ ವಿರುದ್ಧ ದೂರು ಕೊಟ್ಟರೆ, ನನ್ನ ಗಂಡನ ಮೊದಲ ಹೆಂಡತಿಗೆ ಮೂರು ಮಕ್ಕಳಿದ್ದಾರೆ, ಅವರಿಗೆ ತೊಂದರೆ ಆಗುತ್ತದೆ ಎಂದು ಜೀವ ನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆಯ ತ್ಯಾಗ ಮತ್ತು ತಾಯ್ತನ ನೋಡಿ ನ್ಯಾಯಮೂರ್ತಿಗಳು, ಇದು ನಮ್ಮ ದೇಶದ ಹೆಣ್ಣಿನ ತ್ಯಾಗ ಎಂದು ಉದ್ಘಾರ ಹಾಕಿದರು.

Advertisement

ಸರ್‌ ನಿಮ್ಮ ಕಾರ್ಡ್‌ ಕೊಡಿ
ನ್ಯಾಯಮೂರ್ತಿಗಳು ಸೂಪರ್‌ ಸ್ಪೇಷಾಲಿಟಿ ವಿಭಾಗದ ಕುಂದುಕೊರತೆ ವಿಚಾರಿಸಲು ಮುಂದಾದಾಗ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಸಿಬ್ಬಂದಿಯೊಬ್ಬರು, “ಸರ್‌ ನಿಮ್ಮ ಕಾರ್ಡ್‌ ಕೊಡಿ ಮೇಲಧಿಕಾರಿಗಳಿಗೆ ತೋರಿಸಿ ನಿಮ್ಮನ್ನು ಅವರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದರು. ಅದಕ್ಕೆ, ಬಹಳ ವಿನಯದಿಂದ ನ್ಯಾಯಮೂರ್ತಿಗಳು, “ತಾಯಿ ನಾನು ಜಸ್ಟಿಸ್‌ ಬಿ. ವೀರಪ್ಪ ಹೈಕೋರ್ಟ್‌ ಜಡ್ಜ್ ಮತ್ತು ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ, ಅಧಿಕಾರಿ ಗಳನ್ನು ಭೇಟಿ ಮಾಡಲು ಅಲ್ಲ, ವ್ಯವಸ್ಥೆ ಪರಿಶೀಲಿಸಲು ಬಂದಿದ್ದೇನೆ ಎಂದು ವಾರ್ಡ್‌ಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿದರು. ವಾಪಸ್‌ ತೆರಳುವಾಗ ಇನ್ನೂ ಆಕ್ಟಿವ್‌ ಆಗಿ ಕೆಲಸ ಮಾಡಬೇಕಮ್ಮ ಎಂದು ಕಿವಿಮಾತು ಹೇಳಿದರು.

ದಾರಿ ಯಾವುದಯ್ನಾ ವಿಕ್ಟೋರಿಯಾ ಆಸ್ಪತ್ರೆಗೆ
ಅನರೀಕ್ಷಿತ ಭೇಟಿ ನೀಡಿದ ನ್ಯಾಯಮೂರ್ತಿಗಳ ಕಾರು ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯ ಪ್ರವೇಶ ದ್ವಾರದ ಬಳಿ ತಲುಪಿದಾಗ ಸಾಲಾಗಿ ಬಿಎಂಟಿಸಿ ಬಸ್‌ಗಳು ನಿಂತಿದ್ದವು, ತಳ್ಳುಗಾಡಿಗಳ ಸಾಲು ಇತ್ತು. ಪ್ರವೇಶ ದ್ವಾರಕ್ಕೆ ಅಂಟಿಕೊಂಡೇ ಸಣ್ಣಪುಟ್ಟ ಅಂಗಡಿಗಳಿದ್ದವು. ಬಿಎಂಟಿಸಿ ಬಸ್‌ಗಳನ್ನು ದಾಟಿ ಒಳಗೆ ಹೋಗಲು 15 ನಿಮಿಷಕ್ಕೂ ಹೆಚ್ಚು ಕಾಲ ಬೇಕಾಯಿತು. ನ್ಯಾಯೂಮೂರ್ತಿಗಳ ಗನ್‌ಮ್ಯಾನ್‌ ಕೆಳಗೆ ಇಳಿದು ಬಿಎಂಟಿಸಿ ಬಸ್‌ಗಳನ್ನು ಮುಂದಕ್ಕೆ ಹೋಗುವಂತೆ ಹೇಳ ಬೇಕಾಯಿತು. ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ನ್ಯಾಯ ಮೂರ್ತಿಗಳು ತರಾಟೆಗೆ ತೆಗೆದುಕೊಂಡರು. ಸೂಪರ್‌ ಸ್ಪೇಷಾಲಿಟಿ ವಿಭಾಗದ ಮುಂಭಾಗದಲ್ಲೂ ಆ್ಯಂಬುಲೆನ್ಸ್‌ ಹೋಗಲು ಇಕ್ಕಟ್ಟಿನ ರಸ್ತೆ ಇತ್ತು. ಅದನ್ನು ಸರಿಪಡಿಸುವಂತೆ ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರಿಗೆ ನ್ಯಾಯಮೂರ್ತಿಗಳು ತಾಕೀತು ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next