ಪಣಜಿ: ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆಂದು ಡಿಸೆಂಬರ್ 31 ರಂದು ಸ್ನೇಹಿತರ ಮನೆಗೆ ಪಾರ್ಟಿಗೆ ತೆರಳಿದ್ದ 14 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಗೋವಾ ಪೋಲಿಸರು 22 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಈ ಯುವಕನು ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವುದು ಪೋಲಿಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಗೋವಾ ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ ಅತ್ಯಾಚಾರಕ್ಕೊಳಗಾಗಿರುವ ಅಪ್ರಾಪ್ತೆಯು ಡಿಸೆಂಬರ್ 31 ರಂದು ಸ್ನೇಹಿತರೊಂದಿಗೆ ಪಾರ್ಟಿಗಾಗಿ ಮನೆಯಿಂದ ಹೊರಗೆ ಹೋಗಿದ್ದಳು. ಆದರೆ ಬಾಲಕಿಯು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇರುವುದನ್ನು ಕಂಡ ಆಕೆಯ ಸಂಬಂಧಿಕರು ಗೋವಾ ಪೋಲಿಸ್ ಠಾಣೆಗೆ ತೆರಳಿ ಪೋಲಿಸ್ ದೂರು ದಾಖಲಿಸಿದರು.
ಬಾಲಕಿ ನಾಪತ್ತೆಯಾಗಿರುವ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ಆಗ ಈ ಬಾಲಕಿಯು ಒಬ್ಬ ಯುವಕನೊಂದಿಗೆ ಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಇಬ್ಬರ ತಪಾಸಣೆ ನಡೆಸಿದ್ದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಪೋಲಿಸರು ಯುವಕನನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.