ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷ ಯುಪಿಎ ನೇತೃತ್ವದ ಅಭ್ಯರ್ಥಿ ಮೀರಾಕುಮಾರ್‌ಗಿಂತ ಹೆಚ್ಚಿನ ಬೆಂಬಲ ಗಳಿಸಲು ಶಕ್ತವಾಗಿರುವ ಎನ್‌ಡಿಎ, ಉಪ-ರಾಷ್ಟ್ರಪತಿ ಚುನಾವಣೆಯಲ್ಲಿಯೂ ಅದೇ ಮಾದರಿ ಅನುಸರಿಸಲು ಹೊರಟಿದೆ. ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಬಿಜೆಪಿ ನಾಯಕ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಸಂಸತ್ ಭವನದಲ್ಲಿ ನಾಮಪತ್ರ ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ತಲೆಯಾಳು ಎಲ್.ಕೆ.ಆಡ್ವಾಣಿ ಈ ಸಂದರ್ಭದಲ್ಲಿದ್ದರು. ಇಬ್ಬರು ಹಿರಿಯರ ಸಮ್ಮುಖದಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ಗೌರವದ ವಿಚಾರ. ಇನ್ನು ಮುಂದೆ ತಾವು ಬಿಜೆಪಿಯ ಭಾಗವಾಗಿರುವುದಿಲ್ಲ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಗೊಳಿಸುವುದೇ ತಮ್ಮ ಆದ್ಯತೆ ಎಂದು ನಾಯ್ಡು ಹೇಳಿದರು.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗೋಷ್ಠಿ ನಡೆಸಿದ ನಾಯ್ಡು ಅವರು ಉಪರಾಷ್ಟ್ರಪತಿ ಹುದ್ದೆಯನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದೇನೆ ಎಂಬ ಕೆಲ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದರು. “ಸರ್ವಪಳ್ಳಿ ರಾಧಾ ಕೃಷ್ಣನ್, ಝಾಕೀರ್ ಹುಸೇನ್, ಎಂ.ಹಿದಾಯತುಲ್ಲಾ, ಆರ್.ವೆಂಕಟರಾಮನ್, ಶಂಕರ ದಯಾಳ್ ಶರ್ಮಾ ಮತ್ತು ಭೈರೋನ್ ಸಿಂಗ್ ಶೆಖಾವತ್ ಸೇರಿದಂತೆ ಗಣ್ಯಾತಿಗಣ್ಯರು ನಿರ್ವಹಿಸಿದ ಹೊಣೆಯನ್ನು ನಿರ್ವಹಿ ಸಲಿದ್ದೇನೆ ಎಂಬ ಎಚ್ಚರಿಕೆ ಇದೆ. ಆ ಹುದ್ದೆಯ ಮೇಲೆ ಗುರುತರ ಹೊಣೆಯೂ ಇದೆ ಎಂಬ ವಿಚಾರವೂ ತಿಳಿದಿದೆ ‘ ಎಂದರು.
ಪಕ್ಷಕ್ಕೆ ರಾಜೀನಾಮೆ: ಸೋಮವಾರ ತಡರಾತ್ರಿಯೇ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿರುವ ನಾಯ್ಡು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾಗಿ ಅವರ ಆಪ್ತ ವಲಯದವರು ತಿಳಿಸಿದ್ದಾರೆ. ಮುಂದಿನ ತಿಂಗಳು 5ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿರುವುದರಿಂದ ರಾಜ್ಯಸಭೆಯ ಸದಸ್ಯರಾಗಿ ಮುಂದುವರಿಯಲಿದ್ದಾರೆ.
2019ರಲ್ಲಿ ಮೋದಿಯೇ ಪ್ರಧಾನಿಯಾಗಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಂದರೆ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಅಧಿಕಾರಕ್ಕೆ ಬರಲಿ ಎಂದಿದ್ದಾರೆ ನಾಯ್ಡು. ಆ ಸಂದರ್ಭದಲ್ಲಿ ಅವರ ಜತೆ ಸಮಾಜ ಸೇವೆ ನಡೆಸುವ ಗುರಿ ಹಾಕಿಕೊಂಡಿದ್ದೆ. ಆದರೆ ವಿಧಿ ಎಲ್ಲವನ್ನೂ ಬದಲಿಸಿದೆ ಎಂದಿದ್ದಾರೆ ನಾಯ್ಡು.
ಇರಾನಿ, ತೋಮರ್‌ಗೆ ಹೆಚ್ಚುವರಿ ಹೊಣೆ: ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿಗೆ ವೆಂಕಯ್ಯ ರಾಜೀನಾಮೆಯಿಂದ ತೆರವಾಗಿರುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ನಗರಾಭಿವೃದ್ಧಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಪಕ್ಷದ ಹಿರಿಯ ನಾಯಕರ ಭೇಟಿ
ನಾಯ್ಡು ಅವರು ಮಂಗಳವಾರ ಬಿಜೆಪಿಯ ಹಿರಿಯ ನಾಯಕ ರಾದ ಎ.ಬಿ.ವಾಜಪೇಯಿ, ಎಲ್.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರನ್ನು ಭೇಟಿಯಾದರು. ಗಮನಾರ್ಹ ಅಂಶವೆಂದರೆ ಸಮಾಜವಾದಿ ಪಕ್ಷ ಕೂಡ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದೆ. ಈ ಬಗ್ಗೆ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಹೇಳಿಕೆ ನೀಡಿದ್ದಾರೆ.