ಹೊಸದಿಲ್ಲಿ : ಎನ್‌ಡಿಎ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಇದೀಗ ನಡೆಯುತ್ತಿರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ವಿಜಯದ ಬಗ್ಗೆ ವಿಶ್ವಾಸ ಹೊಂದಿದ್ದಾರೆ.
“ಎಲ್ಲ ಸಂಸತ್ ಸದಸ್ಯರಿಗೆ ನಾನು ಯಾರೆಂದು ಗೊತ್ತು; ಅವರೆಲ್ಲ ನನಗೆ ಗೊತ್ತು. ಆದುದರಿಂದಲೇ ನಾನು ಪ್ರಚಾರಾಭಿಯಾನ ಕೈಗೊಂಡಿಲ್ಲ. ನಾನು ಎಲ್ಲ ಸದಸ್ಯರಿಗೆ ಸವಿನಯ ಪತ್ರವನ್ನು ಬರೆದು ನನಗೇ ಮತ ಹಾಕುವಂತೆ ಕೋರಿದ್ದೇನೆ. ಅದಕ್ಕೆ ಉತ್ತಮವಾದ ಪ್ರತಿಕ್ರಿಯೆ ಇದೆ. ಎಲ್ಲರೂ ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ವೆಂಕಯ್ಯ ನಾಯ್ಡು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ವೆಂಕಯ್ಯ ನಾಯ್ಡು ವಿರುದ್ಧ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಲದ ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಅವರು ದೇಶದ ಹದಿನೈದನೇ ಉಪ ರಾಷ್ಟಪತಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ.
“ವ್ಯಕ್ತಿಯೇ ಇರಲಿ, ಪಕ್ಷವೇ ಇರಲಿ, ನಾನು ಯಾರ ವಿರುದ್ಧವೂ ಸ್ಪರ್ಧಿಸುತ್ತಿಲ್ಲ. ನಾನು ಕೇವಲ ಭಾರತದ ಉಪ ರಾಷ್ಟ್ರಪತಿ ಹುದ್ದೆಗಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ವೆಂಕಯ್ಯ ನಾಯ್ಡು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಉಪ ರಾಷ್ಟ್ರಪತಿ ಚುನಾವಣೆ ಬೆಳಗ್ಗೆ 10ಕ್ಕೆ ಆರಂಭವಾಗಿದ್ದು ಸಂಜೆ ಐದರ ವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ ರಾತ್ರಿಯೊಳಗೆ ಫಲಿತಾಂಶ ಹೊರಬೀಳಲಿದೆ.
ಉಪ ರಾಷ್ಟ್ರಪತಿ ಚುನಾವಣೆ ಗೆಲ್ಲುವವರು ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಾರೆ.