ಆ. 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅಧಿಕಾರಾವಧಿ ಮುಗಿಯುವ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆಯುತ್ತಿದೆ.
Advertisement
ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿ ರುವಂತೆ, ಉಪರಾಷ್ಟ್ರಪತಿ ಚುನಾವಣ ಅಖಾಡವೂ ಸಿದ್ಧವಾಗುತ್ತಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನ್ಕರ್ ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಸ್ಪರ್ಧೆ ಮಾಡಲಿದ್ದಾರೆ. ಹಾಗಾದರೆ, ಈ ಚುನಾವಣೆ ಹೇಗೆ ನಡೆಯುತ್ತದೆ? ಇದರ ಮತದಾರರು ಯಾರು? ಈ ವಿವರ ಇಲ್ಲಿದೆ.
ಆರ್ಟಿಕಲ್ 66ರ ಪ್ರಕಾರ, ಉಪರಾಷ್ಟ್ರಪತಿ ಚುನಾವಣೆಗೆ ಮತ ಹಾಕುವವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು. ಇದು ಸೀಕ್ರೆಟ್ ಬ್ಯಾಲೆಟ್ ಮತದಾನವಾಗಿದ್ದು, ಸದಸ್ಯರು ಪ್ರಾಶಸ್ತ್ಯದ ಮತ ಹಾಕಬಹುದು. ಮೊದಲನೇ ಪ್ರಾಶಸ್ತ್ಯದ ಮತ ಹಾಕದಿದ್ದರೆ ಅದು ಅಸಿಂಧುವಾಗುತ್ತದೆ. ಎಲ್ಲರೂ ತಾವು ಇಚ್ಛಿಸುವ ಅಭ್ಯರ್ಥಿಗೇ ಮೊದಲ ಪ್ರಾಶಸ್ತ್ಯದ ಮತ ಹಾಕಬೇಕು. ಸ್ಪರ್ಧಿಸಲು ಅರ್ಹತೆ ಏನು?
ಈ ಚುನಾವಣೆಯಲ್ಲಿ ಸ್ಪರ್ಧಿಸುವವರು ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಾಗಿರಬಾರದು. ಒಮ್ಮೆ ಸ್ಪರ್ಧಿಸಬೇಕು ಅಂದುಕೊಂಡರೆ, ನಾಮಪತ್ರ ಸಲ್ಲಿಕೆ ಮಾಡುವ ಮುನ್ನವೇ ಸದರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇವರ ಅವಧಿ 5 ವರ್ಷಗಳಾಗಿದ್ದು, ಒಂದು ವೇಳೆ ನಿಗದಿತ ಅವಧಿಯಲ್ಲಿ ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಆಗದಿದ್ದರೆ, ಮುಂದಿನ ವ್ಯವಸ್ಥೆಯಾಗುವ ವರೆಗೂ ಅವರೇ ಮುಂದುವರಿಯಬಹುದು.
Related Articles
ಉಪರಾಷ್ಟ್ರಪತಿಯವರ ಪ್ರಮುಖ ಅಧಿಕಾರವೇ ರಾಜ್ಯಸಭೆಯ ಸಭಾಪತಿಯಾಗುವುದು. ಒಂದು ವೇಳೆ ರಾಷ್ಟ್ರಪತಿಗಳು ಅನಾರೋಗ್ಯ, ಸಾವು, ರಾಜೀನಾಮೆ ಸೇರಿದಂತೆ ಇನ್ನಾವುದೇ ಸಂದರ್ಭದಲ್ಲಿ ಅಧಿಕಾರ ಚಲಾಯಿಸಲು ಆಗದಿದ್ದರೆ ಆಗ ಉಪರಾಷ್ಟ್ರಪತಿಗಳೇ ಹಂಗಾಮಿಯಾಗಿ ಅಧಿಕಾರ ನಡೆಸಬಹುದು.
Advertisement