ಬೆಂಗಳೂರು: ಕೈಗಾರಿಕೋದ್ಯಮಿಗಳಿಗೆ ಹಾಗೂ ಬೃಹತ್ ವ್ಯಾಪಾರಿಗಳಿಗೆ ಬೇಕಾದ ಉತ್ತಮ ವಾತಾವರಣ ಗುಜರಾತ್ ಸರ್ಕಾರ ಸೃಷ್ಟಿಸಿಕೊಡುತ್ತಿರುವುದರಿಂದ ಹೂಡಿಕೆ ಪ್ರಮಾಣ ಹೆಚ್ಚುತ್ತಿದೆ ಎಂದು ಅಲ್ಲಿನ ಶಿಕ್ಷಣ ಸಚಿವ ಭುಪೇಂದ್ರಸಿನ್ಹಾ ಚೂಡಾಸಮ ಹೇಳಿದರು.
ವೈಬ್ರೆಂಟ್ ಗುಜರಾತ್-2019 ಜಾಗತಿಕ ವ್ಯಾಪಾರ ಸಮ್ಮೇಳನದ 9ನೇ ಆವೃತ್ತಿ 2019 ಜ. 18 ರಿಂದ 22ರವರೆಗೆ ನಡೆಯಲಿದ್ದು. ಈ ಸಂಬಂಧ ಮಂಗಳವಾರ ನಗರದಲ್ಲಿ ನಡೆದ ಹೂಡಿಕೆದಾರರೊಂದಿಗೆ ಸಂವಾದ ಮತ್ತು ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವೇಳೆ ಎಲ್ಲ ರಂಗದ ಅಭಿವೃದ್ಧಿಗೆ ಭದ್ರ ಬೂನಾದಿ ಹಾಕಿಕೊಟ್ಟಿದ್ದರು. ಅದರಂತೆ ಇಂದಿನ ಸರ್ಕಾರವೂ ಕೆಲಸ ಮಾಡುತ್ತಿದೆ. ಡಿಜಿಟಲ್ ಇಂಡಿಯಾ ಕಲ್ಪನೆಯ ಸಾಕಾರಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ರಾಜ್ಯದ 32 ಜಿಲ್ಲೆಗಳಲ್ಲೂ ಕೈಗಾರಿಕೆಗಳಿವೆ ಎಂದು ಹೇಳಿದರು.
ರಾಜ್ಯದ ಹೊರಗಿನ ಮತ್ತು ಸ್ಥಳೀಯ ಕೈಗಾರಿಕೋದ್ಯಮಿಗಳಿಗೆ ಅಗತ್ಯ ಭದ್ರತೆ ಒದಗಿಸುತ್ತಿದ್ದೇವೆ. ಇದರ ಜತೆಗೆ ಉದ್ಯಮ, ರೈತರು ಸಹಿತವಾಗಿ ಎಲ್ಲ ರಂಗದ ಕ್ಷೀಪ್ರ ಪ್ರಗತಿ ಸಾಧಿಸುತ್ತಿದ್ದೇವೆ. ಶುದ್ಧ ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆ, ಬಂದರು ಹೀಗೆ ಎಲ್ಲ ಕ್ಷೇತ್ರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ವೈಬ್ರೆಂಟ್ ಗುಜರಾತ್ ಜಾಗತಿಕ ವ್ಯಾಪಾರ ಸಮ್ಮೇಳನ 2003ರಿಂದ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಬ್ಯಾಂಕಿಂಗ್, ಫೈನಾನ್ಸ್, ಐಟಿ, ಕೃಷಿ, ಆಹಾರ, ಕೆಮಿಕಲ್, ಪೆಟ್ರೊಕೆಮಿಕಲ್, ಸಿನೆಮಾ, ಫಾರ್ಮಸಿ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿ, ಡಿಫೆನ್ಸ್, ಅಟೋಮೊಬೈಲ್ ಸೇರಿದಂತೆ ನೂರಾರು ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ವ್ಯಾಪಾರ ಸಮ್ಮೇಳನ ಆಯೋಜಿಸಿದ್ದೇವೆ. ದೇಶ ವಿದೇಶಗಳಿಂದ 35 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಂವಾದ, ಚರ್ಚೆ, ವಿಚಾರ ವಿನಿಮಯ ಹೀಗೆ ನಾನಾ ಕಾರ್ಯಕ್ರಮದ ಜತೆಗೆ ವ್ಯಾಪಾರ ಮತ್ತು ಹೂಡಿಕೆ ಸಂಬಂಧಿಸಿದ ಒಪ್ಪಂದಗಳು ನಡೆಯಲಿದೆ ಎಂದು ವಿವರಿಸಿದರು. ಗುಜರಾತಿನ ಹಿರಿಯ ಐಎಎಸ್ ಅಧಿಕಾರಿಗಳಾದ ಡಾ.ಜಯಂತಿ ರವಿ, ಮಮತಾ ವರ್ಮಾ, ಫಿಕ್ಕಿ ರಾಜ್ಯ ಘಟಕದ ಅಧ್ಯಕ್ಷ ಶೇಖರ್ ವಿಶ್ವನಾಥನ್ ಮೊದಲಾದವರು ಇದ್ದರು.