ಬೆಂಗಳೂರು/ ಚೆನ್ನೈ: ಬಹುಭಾಷ ನಟಿಯಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ಶಕುಂತಲಾ (Sakunthala) ಹೃದಯಾಘಾತದಿಂದ ಮಂಗಳವಾರ(ಸೆ.17ರಂದು) ನಿಧನರಾಗಿದ್ದಾರೆ.
ಬೆಂಗಳೂರಿನಲ್ಲಿ ತನ್ನ ಮಗಳ ಮನೆಯಲ್ಲಿ ವಾಸಿಸುತ್ತಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ ಮಧ್ಯಾಹ್ನ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಂಜೆ ವೇಳೆಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸೇಲಂ ಜಿಲ್ಲೆಯ ಅರಿಸಿಪಾಳ್ಯಂನವರಾಗಿದ್ದ ಅವರು ಆರಂಭದಲ್ಲಿ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದರು. ಆ ಬಳಿಕ ಸಣ್ಣಪುಟ್ಟ ಪಾತ್ರಗಳಿಂದ ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು.
ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಸುಮಾರು 600 ಸಿನಿಮಾಗಳಲ್ಲಿ ಅವರು ನಟಿಸಿದ್ದರು ಎಂದು ವರದಿ ತಿಳಿಸಿದೆ.
1970ರಲ್ಲಿ ಬಂದ ಪೊಲೀಸ್ ಥ್ರಿಲ್ಲರ್, ʼಸಿಐಡಿ ಶಂಕರ್ʼ ಸಿನಿಮಾದಲ್ಲಿನ ಅವರ ಅಭಿನಯ ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುವಂತೆ ಮಾಡಿತು. ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಜೈಶಂಕರ್ ನಟಿಸಿದ್ದರು.
ಶಿವಾಜಿ ಗಣೇಶನ್ ಮತ್ತು ಎಂಜಿಆರ್ ಅವರಂತಹ ದಿಗ್ಗಜ ನಟರೊಂದಿಗೆ ಅವರು ತೆರೆ ಹಂಚಿಕೊಂಡಿದ್ದರು. ʼಪಾಡಿಕ್ಕಡ ಮೆತೈʼ , ʼಕೈ ಕೊಡುತ್ತ ಧೈವಂʼ, ‘ಪೊನ್ನುಂಚಲ್’, ‘ರಾಜರಾಜ ಚೋಳನ್’,‘ಅಶಿಕ್ಷಿತ ಪ್ರತಿಭೆ’, ‘ಕೊಟ್ಟ ದೇವತೆ’, ‘ಪಶ್ಚಾತ್ತಾಪ’, ‘ವಸಂತ ಅರಮನೆ’, ‘ನ್ಯಾಯ’, ‘ಭಾರತ ವಿಲಾಸ’ , ನೇತಾಜಿ (1996), ನಾನ್ ವನಂಗುಮ್ ದೈವಂ (1963) ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದರು.
1998 ರಲ್ಲಿ ಬಂದ ʼಪೊನ್ಮಾನೈ ತೇಡಿʼ ಸಿನಿಮಾದಲ್ಲಿ ಅವರು ಕೊನೆಯದಾಗಿ ನಟಿಸಿದ್ದರು. ಇದಾದ ಬಳಿಕ ಅವರು 2019ರವರೆಗೆ ಧಾರಾವಾಹಿಗಳಲ್ಲಿ ನಟಿಸಿದ್ದರು. 9 ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದರು.
ಅವರ ನಿಧನಕ್ಕೆ ಅನೇಕ ಸಿನಿಮಾ ಮಂದಿ ಕಂಬನಿ ಮಿಡಿದಿದ್ದಾರೆ.