Advertisement

ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಚಂದ್ರಶೇಖರ ಭಂಡಾರಿ ವಿಧಿವಶ

09:17 PM Oct 30, 2022 | Team Udayavani |

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ, ಖ್ಯಾತ ಲೇಖಕ, ವಾಗ್ಮಿ ಚಂದ್ರಶೇಖರ ಭಂಡಾರಿ (87) ಅ. 30ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Advertisement

ಮೂಲತಃ ಮಂಗಳೂರಿನವರಾಗಿದ್ದ ಅವರು ಕರ್ನಾಟಕದ ಹಿರಿಯ ಪ್ರಚಾರಕರಾಗಿದ್ದಾರೆ. ಅಂತಿಮ ದರ್ಶನವು ಪ್ರಾಂತ ಕಾರ್ಯಾಲಯ “ಕೇಶವಕೃಪಾ’ದಲ್ಲಿ ಸೋಮವಾರ (ಅ.31) ಬೆಳಗ್ಗೆ 8ರಿಂದ 9ರ ವರೆಗೆ ನಡೆಯಲಿದೆ. ಬಳಿಕ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕನ್ನಡ ಸಾಹಿತ್ಯ ವಲಯದಲ್ಲಿ ಪರಿಚಿತ ಹೆಸರಾಗಿದ್ದ ಇವರು ಮಂಗಳೂರಿನ ಉರ್ವ ಕೆನರಾ ಪ್ರೌಢಶಾಲೆ, ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಬಿ.ಎಸ್ಸಿ. ಹಾಗೂ ಸರಕಾರಿ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್‌. ಶಿಕ್ಷಣ ಪೂರೈಸಿದರು. 1958ರಿಂದ 1961ರ ತನಕ ಅಧ್ಯಾಪಕರಾಗಿ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್‌ನಲ್ಲಿ ಹಾಗೂ ಉಡುಪಿ ಸಮೀಪದ ಕಲ್ಯಾಣಪುರ‌ದ ಮಿಲಾಗ್ರಿಸ್‌ ಹೈಸ್ಕೂಲ್‌ನಲ್ಲಿ ಸೇವೆ ಸಲ್ಲಿಸಿದ್ದರು.

1961ರಿಂದ ಆರೆಸ್ಸೆಸ್‌ ಪ್ರಚಾರಕರಾಗಿದ್ದ ಅವರು ಸುದೀರ್ಘ‌ 62 ವರ್ಷಗಳ ಕಾಲ ಮಂಗಳೂರು, ತುಮಕೂರು ಹಾಗೂ ಮೈಸೂರು ವಿಭಾಗಗಳ ವಿವಿಧ ಪ್ರದೇಶಗಳಲ್ಲಿ ವಿಭಾಗ ಪ್ರಚಾರಕ್‌ ಸೇರಿ ವಿವಿಧ ಹಂತಗಳಲ್ಲಿ ಸಂಘದ ಪ್ರಚಾರಕರಾಗಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭೂಗತರಾಗಿ ಕೆಲಸ ಮಾಡಿದ ಅವರು 1984ರಲ್ಲಿ ಹೊ.ವೆ. ಶೇಷಾದ್ರಿ ಅವರ ಅಪೇಕ್ಷೆಯಂತೆ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. 1994ರಲ್ಲಿ ಕರ್ನಾಟಕದ ಪ್ರಚಾರ ಪ್ರಮುಖರಾಗಿ 2012ರ ತನಕ ಜವಾಬ್ದಾರಿ ನಿರ್ವಹಿಸಿದ್ದರು. 2000ರಲ್ಲಿ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಸಂಸ್ಥಾಪಕ ವಿಶ್ವಸ್ಥರಾಗಿ ಕಾರ್ಯ ನಿರ್ವಹಿಸಿದರು. 2012ರಲ್ಲಿ ಅಖೀಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಾಂತ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದರು.

Advertisement

ಹಲವು ದೇಶಭಕ್ತಿ ಗೀತೆಗಳನ್ನು ರಚಿಸಿದ್ದಾರೆ. ಅವರು ರಚಿಸಿದ ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ಗೀತೆಯು ಕನ್ನಡ ಶಾಲಾ ಪಠ್ಯಪುಸ್ತಕದಲ್ಲಿ ಪ್ರಕಟವಾಗಿದೆ. ಜಾಗರಣ ಪ್ರಕಟಣೆಗಳ ಸಾಹಿತ್ಯ, ಆಪ್ತಸಂವಾದ ವಾರ್ತಾಪತ್ರಿಕೆ, ಸಮಾಚಾರ ಸಮೀಕ್ಷೆ ಮತ್ತು ಸಾಮಯಿಕ ಲೇಖನಗಳನ್ನು ರಚಿಸಿದ್ದಾರೆ. ಇವರು ಅನುವಾದಿಸಿದ ಸಾಮಾಜಿಕ ಕ್ರಾಂತಿಸೂರ್ಯ ಡಾ| ಬಾಬಾಸಾಹೇಬ ಅಂಬೇಡ್ಕರ್‌ ಕೃತಿಗೆ 2011ನೇ ಸಾಲಿನ ಅನುವಾದ ಪ್ರಶಸ್ತಿ ಲಭಿಸಿತ್ತು.

ಸಾಹಿತ್ಯ ಕೃತಿಗಳು
ವಿದ್ಯಾರಣ್ಯರ ಭೂಮಿಯಲ್ಲಿ ಶ್ರೀಮಾಧವ, ಗೋಧ್ರಾ ಹಾಗೂ ಸೆಕ್ಯುಲರ್‌ವಾದಿಗಳ ಸೋಗಲಾಡಿತನ, ಸ್ಮತಿ ಮಂದಾರ, ಜನಮನಶಿಲ್ಪಿ, ಕಡಲ ತಡಿಯ ಸಂಘವಟ, ರಾಷ್ಟ್ರನಾಯಕ ಅಂಬೇಡ್ಕರ್‌, ಅಂಬೇಡ್ಕರ್‌ ಅವರ ರಾಷ್ಟ್ರಚಿಂತನೆ, ನಾನಾನಿಂದ ನೇತಾಜಿವರೆಗೆ ಸ್ವಾತಂತ್ರ್ಯ ಸಂಗ್ರಾಮ 1857-1947, ಕದಡಿದ ಪಂಜಾಬ್‌, ಮತಾಂತರ ಒಂದು ಸಂವಾದ, ದತ್ತೋಪಂತ ಠೇಂಗಡಿ, ನಿರ್ಮಾಲ್ಯ … ಇತ್ಯಾದಿ.

ಗಣ್ಯರಿಂದ ಸಂತಾಪ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ| ಕೆ. ಸುಧಾಕರ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಆರೆಸ್ಸೆಸ್‌ ಸರಸಂಘಚಾಲಕ ಡಾ| ಮೋಹನ್‌ ಭಾಗವತ್‌, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next