ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಬುಧವಾರ (ಫೆ.22) ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಂಗೇರುತ್ತಿರುವ ಚುನಾವಣಾ ಅಖಾಡ: ಫೆ.24ರಿಂದ ರಾಜ್ಯಾದ್ಯಂತ ಬಿಜೆಪಿ ಪ್ರಗತಿ ರಥಯಾತ್ರೆ
ಅನಂತ್ ನಾಗ್ (74ವರ್ಷ) ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದ ಕಾರ್ಯವೈಖರಿಯನ್ನು ಬೆಂಬಲಿಸುತ್ತಾ ಬಂದಿದ್ದು, ಇದೀಗ ಅವರು ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ(ಸಂಜೆ 4.20) ಸೇರ್ಪಡೆಯಾಗುತ್ತಿರುವುದಾಗಿ ಮೂಲಗಳು ಹೇಳಿವೆ.
ಅನಂತ್ ನಾಗ್ ಅವರು ನಟರಾಗಿಯೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಜೆಎಚ್ ಪಟೇಲ್ ಸರ್ಕಾರದಲ್ಲಿ ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅನಂತ್ ನಾಗ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2004ರಲ್ಲಿ ಅನಂತ್ ನಾಗ್ ಅವರು ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಅಂದು ಅನಂತ್ ನಾಗ್ ಅವರು ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಸ್.ಎಂ.ಕೃಷ್ಣ ಮತ್ತು ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಚಂದ್ರು ವಿರುದ್ಧ ಸ್ಪರ್ಧಿಸಿದ್ದರು.
“ತೆರೆಯ ಮೇಲೆ ರಾಜಕಾರಣಿಯ ಪಾತ್ರ ನಿರ್ವಹಿಸುವುದು ತುಂಬಾ ಸುಲಭ. ಆದರೆ ರಾಜಕೀಯಕ್ಕೆ ಬಂದ ಮೇಲೆ ರಾಜಕಾರಣಿಯಾಗುವುದು ಎಷ್ಟು ಕಷ್ಟ ಎಂದು ನನಗೆ ಅರ್ಥವಾಯಿತು” ಎಂದು 2020ರಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ ಅನಂತ್ ನಾಗ್ ಹೇಳಿದ್ದರು.
ಬಳಿಕ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ ರಾಜಕೀಯದಿಂದ ದೂರ ಉಳಿದಿದ್ದರು. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿರುವ ಅನಂತ್ ನಾಗ್ ಅವರು ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ತೆರೆಕಂಡ “ಸಂಕಲ್ಪ” ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿಪರದೆ ಪ್ರವೇಶಿಸಿದ್ದರು.