ಹೈದರಬಾದ್: ಸಿನಿ ದಿಗ್ಗಜರಾದ ಕಮಲ್ ಹಾಸನ್, ಚಿರಂಜೀವಿ, ಮಮ್ಮುಟ್ಟಿ, ಮೋಹನ್ ಲಾಲ್ ಸೇರಿದಂತೆ ಅನೇಕ ಗಣ್ಯರು ಗುರುವಾರ ರಾತ್ರಿ ನಿಧನರಾದ ತೆಲುಗು ಸಿನಿ ರಂಗದ ಖ್ಯಾತ ನಿರ್ದೇಶಕ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಕಲಾಪತಸ್ವಿ ಕೆ.ವಿಶ್ವನಾಥ್ ಅವರ ಅಂತಿಮ ದರ್ಶನ ಪಡೆದರು.
ವಯೋಸಹಜ ಅನಾರೋಗ್ಯದಿಂದಾಗಿ ವಿಶ್ವನಾಥ್(92) ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಇಹಲೋಕ ತ್ಯಜಿಸಿದರು. ಶುಕ್ರವಾರ ಸಂಜೆ ಅವರ ಅಂತ್ಯಕ್ರಿಯೆ ನೆರವೇರಿತು.
ವಿಶ್ವನಾಥ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
“ಅವರು ಸೃಜನಶೀಲ ಮತ್ತು ಬಹುಮುಖಿ ನಿರ್ದೇಶಕರಾಗಿದ್ದು, ಸಿನಿಮಾ ಪ್ರಪಂಚದ ಧೀಮಂತರಾಗಿದ್ದರು. ಅವರ ಚಲನಚಿತ್ರಗಳು ಹಲವಾರು ಪ್ರಕಾರಗಳನ್ನು ಒಳಗೊಂಡಿದ್ದು, ದಶಕಗಳವರೆಗೆ ಪ್ರೇಕ್ಷಕರನ್ನು ಆಕರ್ಷಿಸಿದವು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಓಂ ಶಾಂತಿ,’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಶಂಕರಾಭರಣಂ, ಸಾಗರಸಂಗಮಂ, ಆತ್ಮ ಗೌರವಂ, ಶ್ರುತಿಲಯಲು, ಸಿರಿವೆನ್ನೆಲ, ಸ್ವರ್ಣಕಮಲಂ, ಸ್ವಾತಿಕಿರಣಂ, ಸಪ್ತಪದಿ, ಸ್ವಾತಿಮುತ್ಯಂ, ಸ್ವಯಂಕೃಷಿ, ಶುಭೋದಯಂ, ಶುಭಲೇಖ, , ಶುಭಸಂಕಲ್ಪ, ಟ್ಯಾಗೋರ್, ಅತುಡು, ಆಂಧ್ರ, ಮಿಸ್ಟರ್ ಪಫೆìಕ್ಟ್, ಕಲಿಸುಂದಾಂ ರಾ ಇವು ಕೆ.ವಿಶ್ವನಾಥ್ ಅವರು ನಿರ್ದೇಶಿಸದ ಕೆಲವು ಪ್ರಮುಖ ಚಿತ್ರಗಳು.
ಸಿನಿಮಾ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ 2016ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 1992ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ ಏಳು ಬಾರಿ ನಂದಿ ಅವಾರ್ಡ್ ಮತ್ತು ದಕ್ಷಿಣ ಭಾರತಕ್ಕಾಗಿ ಇರುವ ಫಿಲ್ಮ ಫೇರ್ ಪ್ರಶಸ್ತಿಯನ್ನು ಏಳು ಬಾರಿ ತಮ್ಮದಾಗಿಸಿಕೊಂಡಿದ್ದರು. ಅಲ್ಲದೇ ಇವರ ನಾಲ್ಕು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಸಂದಾಯವಾಗಿವೆ.