ಮುಂಬಯಿ: ಬಾಲಿವುಡ್ ಮತ್ತು ಹಿಂದಿ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳ ಮೂಲಕ ರಂಜಿಸಿದ್ದ ಹಿರಿಯ ನಟಿ ರೀಮಾ ಲಾಗೂ ಅವರು ಗುರುವಾರ ಬೆಳಗ್ಗೆ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರಿಗೆ 59 ವರ್ಷ ಪ್ರಾಯವಾಗಿತ್ತು.
ಹೈಸ್ಕೂಲ್ ಮುಗಿದ ಕೂಡಲೆ ಬಣ್ಣದ ಬದುಕಿಗೆ ಕಾಲಿರಿಸಿದ್ದ ಲಾಗೂ ಅವರು ನೆನಪಿನಲ್ಲುಳಿಯುವ ಕೆಲ ಸಿನಿಮಾಗಳು ಮತ್ತು ಟಿವಿ ಧಾರಾವಾಹಿಗಳನ್ನು ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಲಾಗೂ ಅವರ ತಾಯಿ ಮಂದಾಕಿನಿ ಬಡ್‌ಬಡೆ ಅವರೂ ನಟಿಯಾಗಿದ್ದರು.ರೀಮಾ ಅವರು ನಟ ವಿವೇಕ್ ಲಾಗೂ ಅವರನ್ನು ವಿವಾಹವಾಗಿದ್ದರು.
ಲಾಗೂ ಅವರು ಸಲ್ಮಾನ್ ಖಾನ್ ಅವರ ತಾಯಿಯಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ತು ತು ಮೈ ಮೈ ಟಿವಿ ಶೋ ನಲ್ಲಿ ಅವರ ಪಾತ್ರ ಎಲ್ಲರ ಮನದಲ್ಲಿ ಅಚ್ಚೊತ್ತಿದೆ.
ಮೈನೇ ಪ್ಯಾರ್ ಕೀಯಾ , ಆಶಿಖೀ ,ಸಾಜನ್,ಹಮ್ ಆಪ್ ಕೇ ಹೇ ಕೌನ್, ವಾಸ್ತವ್, ಕುಚ್ ಕುಚ್ ಹೋತಾ ಹೇ, ಹಮ್ ಸಾಥ್ ಸಾಥ್ ಹೇ ಅವರು ನಟಿಸಿದ ಪ್ರಮುಖ ಚಿತ್ರಗಳಾಗಿವೆ.
ಓಶಿವಾರ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪುತ್ರಿ ಮೃಣ್ಮಯಿ ಮತ್ತು ಅಳಿಯ ವಿನಯ್ ವಾಯ್‌ಕುಲ್ ಅವರನ್ನು ಅಲಿದ್ದಾರೆ.
ಲಾಗೂ ನಿಧನಕ್ಕೆ ಬಾಲಿವುಡ್ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.