ಚೆನ್ನೈ: ಹಿರಿಯ ನಟಿ ಹಾಗೂ ರಾಜಕಾರಣಿ ಜಯಪ್ರದಾ ಅವರಿಗೆ ಚೆನ್ನೈನ ಎಗ್ಮೋರ್ ಕೋರ್ಟ್‌ನಿಂದ ಭಾರೀ ಆಘಾತ ಎದುರಾಗಿದೆ. ಹಲವು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ 6 ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಲಾಗಿದೆ.
ಜಯಪ್ರದಾ ಜತೆಗೆ ಆಕೆಯ ವ್ಯಾಪಾರ ಪಾಲುದಾರರಾದ ರಾಮ್ ಕುಮಾರ್ ಮತ್ತು ರಾಜಾ ಬಾಬು ಅವರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂ.ದಂಡ ವಿಧಿಸಲಾಗಿದೆ.
ಪ್ರಕರಣ ಯಾವುದು?
ಜಯಪ್ರದಾ ಮತ್ತು ಅವರ ವ್ಯಾಪಾರ ಪಾಲುದಾರರು ಚೆನ್ನೈನ ರಾಯಪೇಟಾದಲ್ಲಿ ಚಿತ್ರಮಂದಿರವನ್ನು ಹೊಂದಿದ್ದರು. ಆದರೆ, ಕೆಲ ವರ್ಷಗಳ ಹಿಂದೆ ಚಿತ್ರಮಂದಿರಕ್ಕೆ ನಷ್ಟವಾಗುತ್ತಿದೆ ಎಂದು ಬಂದ್ ಮಾಡಿದ್ದರು. ಆದರೆ ಥಿಯೇಟರ್ ಸಿಬಂದಿಯ ವೇತನದಿಂದ ಕಡಿತಗೊಳಿಸಿದ್ದ ಇಎಸ್‌ಐ ಮೊತ್ತವನ್ನು ಮರುಪಾವತಿಸಲು ವಿಫಲರಾಗಿದ್ದಾರೆ. ತಮ್ಮ ಇಎಸ್‌ಐ ಬಾಕಿಯನ್ನು ಪಾವತಿಸದ ಜಯಪ್ರದಾ, ಅವರ ವ್ಯಾಪಾರ ಪಾಲುದಾರರು ಮತ್ತು ರಾಜ್ಯ ವಿಮಾ ನಿಗಮದ ವಿರುದ್ಧ ಸಿಬಂದಿ ನಂತರ ಎಗ್ಮೋರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಕಾರ್ಮಿಕ ಸರ್ಕಾರಿ ವಿಮಾ ನಿಗಮವು ಜಯಪ್ರದಾ, ರಾಮ್ ಕುಮಾರ್ ಮತ್ತು ರಾಜಾ ಬಾಬು ವಿರುದ್ಧ ಚೆನ್ನೈನ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಇದು ಶಿಕ್ಷೆಗೆ ಕಾರಣವಾಗಿದೆ. ಥಿಯೇಟರ್ ಸಿಬಂದಿಗೆ ನೀಡಬೇಕಿರುವ ಎಲ್ಲಾ ಬಾಕಿಗಳನ್ನು ತೀರಿಸುವುದಾಗಿ ಜಯಪ್ರದಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಪ್ರಕರಣವನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದರೂ, ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿ 6 ತಿಂಗಳ ಜೈಲು ಶಿಕ್ಷೆಯೊಂದಿಗೆ ರೂ. 5,000.ರೂ ದಂಡ ವಿಧಿಸಿದೆ.