ನವದೆಹಲಿ: ಭಾರತೀಯ ಸಿನಿಮಾರಂಗಕ್ಕೆ ನೀಡಿರುವ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಗೌರವಿಸುವ ನಿಟ್ಟಿನಲ್ಲಿ 2020ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಬಾಲಿವುಡ್ ಹಿರಿಯ ನಟಿ ಆಶಾ ಫರೇಖ್(79ವರ್ಷ) ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:‘ಕುಳ್ಳನ ಹೆಂಡತಿ’ ಪ್ರೇಮ ಪುರಾಣ!; ರಿಲೀಸ್ ಗೆ ರೆಡಿಯಾದ ಹೊಸಬರ ಚಿತ್ರ
ಭಾರತೀಯ ಚಿತ್ರರಂಗಕ್ಕೆ ಪರೇಖ್ ಅವರ ಕೊಡುಗೆ ಮಹತ್ತರವಾದದ್ದು, ಈ ಹಿನ್ನೆಲೆಯಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಜ್ಯೂರಿ ಹಿರಿಯ ನಟಿ ಆಶಾ ಪರೇಖ್ ಅವರನ್ನು ಆಯ್ಕೆ ಮಾಡಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವದ ಪ್ರಶಸ್ತಿಯಾಗಿದೆ. 1960, 70ರ ದಶಕದಲ್ಲಿ ಆಶಾ ಪರೇಖ್ ಬಾಲಿವುಡ್ ನ ಬೇಡಿಕೆಯ ನಟಿಯಾಗಿದ್ದರು. ದಿಲ್ ದೇಖೆ, ದೇಖೋ, ಕಟಿ ಪತಂಗ್, ತೀಸ್ರಿ ಮಂಝಿಲ್, ಕಾರ್ವಾನ್ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಪರೇಖ್ ಅಭಿನಯಿಸಿದ್ದರು.
ಆಶಾ ಪರೇಖ್ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. 1952ರಲ್ಲಿ ತೆರೆಕಂಡಿದ್ದ ಬಾಲಿವುಡ್ ನ “ಮಾ” ಚಿತ್ರದಲ್ಲಿ ಪರೇಖ್ ಬಾಲನಟಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಬಳಿಕ 1954ರಲ್ಲಿ ಬಾಪ್ ಬೇಟಿ ಸಿನಿಮಾದಲ್ಲಿ ನಟಿಸಿದ್ದರು. ಆದರೆ 1959ರಲ್ಲಿ ಶಮ್ಮಿ ಕಪೂರ್ ನಾಯಕನ ಪಾತ್ರದಲ್ಲಿ ನಟಿಸಿದ್ದ ದಿಲ್ ದೇಖೆ, ದೇಖೋ ಸಿನಿಮಾದಲ್ಲಿ ಪರೇಖ್ ಹೀರೊಯಿನ್ ಆಗಿ ನಟಿಸಿದ್ದು, ಈ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಅಲ್ಲಿಂದ ಪರೇಖ್ ತಮ್ಮ ಸಿನಿ ಜೀವನದ ಪಯಣದಲ್ಲಿ ಹಿಂದಿರುಗಿ ನೋಡಿಲ್ಲ. 1995ರಲ್ಲಿ ಆಶಾ ಪರೇಖ್ ನಟನೆಗೆ ಗುಡ್ ಬೈ ಹೇಳಿದ್ದರು.