ಹೈದರಾಬಾದ್ : ಹಿರಿಯ ನಟ ಶರತ್ ಬಾಬು ಬಹು ಅಂಗಾಂಗ ವೈಫಲ್ಯದಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ (ಮೇ 22) ಕೊನೆಯುಸಿರೆಳೆದಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಿಡ್ನಿ, ಲಿವರ್ ಸೇರಿದಂತೆ ಅವರ ಅಂಗಾಂಗಗಳು ಬಾಧಿತವಾಗಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಅವರಿಗೆ 73 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶರತ್ ಬಾಬು ಅವರನ್ನು ಮೊದಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಮೇ 5 ರಂದು ಅವರು ನಿಧನ ಹೊಂದಿದ್ದರು ಎಂದು ಸುದ್ದಿಯಾಗಿತ್ತು.
73 ರ ಹರೆಯದ ಶರತ್‌ಬಾಬು ಸುಮಾರು 50 ವರ್ಷಗಳಿಂದ 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ತಮಿಳು, ತೆಲುಗು ಮತ್ತು ಇತರ ಭಾಷೆಗಳಲ್ಲಿ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕ, ಖಳನಟ, ಪೋಷಕ ಪಾತ್ರಧಾರಿಯಾಗಿ ಸಿಕ್ಕ ಪಾತ್ರಗಳಲ್ಲೆಲ್ಲ ತಮ್ಮ ಛಾಪು ಮೂಡಿಸಿದ್ದಾರೆ.
ರಜನಿಕಾಂತ್ ಜತೆ ಮುಳ್ಳುಮ್ ಮಲರುಂ, ತ್ಲೆಕ್ಕರನ್, ಅಣ್ಣಾಮಲೈ ಮತ್ತು ಮುತ್ತು ಚಿತ್ರಗಳ ಮೂಲಕ ಅಭಿಮಾನಿಗಳನ್ನು ಆಕರ್ಷಿಸಿದ್ದರು. 1973 ರಲ್ಲಿ ತೆಲುಗು ಚಲನಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು ಮತ್ತು ನಂತರ ಕೆ. ಬಾಲಚಂದರ್ ನಿರ್ದೇಶನದ ತಮಿಳು ಚಲನಚಿತ್ರ ನಿಝಲ್ ನಿಜಮಗಿರದು (1978) ಮೂಲಕ ಜನಪ್ರಿಯರಾದರು.
ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಉಷಾ, ಅಮೃತ ವರ್ಷಿಣಿ, ಹೃದಯ ಹೃದಯ, ಓ ಪ್ರಿಯತಮ, ನಮ್ ಯಜಮಾನ್ರು ಅವರು ನಟಿಸಿದ ಕೆಲವು ಕನ್ನಡ ಚಿತ್ರಗಳಾಗಿವೆ.
ಶರತ್‌ಬಾಬು ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.