ಮುಂಬಯಿ: 80 ರ ದಶಕದಲ್ಲಿ ದೂರದರ್ಶನದಲ್ಲಿ ʼ ಖೋಪ್ಡಿʼ ಪಾತ್ರದಲ್ಲಿ ಮಿಂಚಿದ್ದ ಹಿರಿಯ ನಟ ಸಮೀರ್ ಖಾಕರ್ (71) ಮಂಗಳವಾರ ಮುಂಜಾನೆ ಮುಂಬಯಿಯಲ್ಲಿ ನಿಧನರಾಗಿದ್ದಾರೆ.
ಕಳೆದ 4 ದಶಕಗಳಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹತ್ತಾರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಗುಜರಾತಿನ ನಾಟಕಗಳಿಂದ ಪಾತ್ರಗಳಿಗೆ ಬಣ್ಣ ಹಚ್ಚಿದ ಸಮೀರ್ ಆ ಬಳಿಕ ಕಿರುತೆರೆಯಿಂದ ಜನಪ್ರಿಯರಾದರು.
ʼಸರ್ಕಸ್ʼ, ʼನಯಾ ನುಕ್ಕಡ್ʼ, ʼಶ್ರೀಮಾನ್ ಶ್ರೀಮತಿʼ, ʼಮಣಿರಂಜನ್ʼ , ಅದಾಲತ್ʼ ನಂತರ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ʼಖೋಪ್ಡಿʼ ಎನ್ನುವ ಅವರ ಪಾತ್ರ 80 ದಶಕದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
ʼಹಸೀ ತೋ ಫಸೀʼ, ʼಪಟೇಲ್ ಕೋ ಪಂಜಾಬಿ ಶಾದಿʼ,ʼ ಪುಷ್ಪಕ್, ʼಪರಿಂದಾʼ, ʼಶಾಹೆನ್ಶಾʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ʼ ಫರ್ಜಿʼ, ʼ ಸುಧೀರ್ ಮಿಶ್ರಾ ಅವರ ʼಸೀರಿಯಸ್ ಮೆನ್ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಸಮೀರ್ ಅವರಿಗೆ ನಿನ್ನೆ ಮುಂಜಾನೆ ( ಮಂಗಳವಾರ) ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಕೂಡಲೇ ವೈದ್ಯರನ್ನು ಕರೆಸಿ ಪರೀಕ್ಷಿಸಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಅವರು ಬುಧವಾರ ಬೆಳಗ್ಗೆ 4:30ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಸಮೀರ್ ಸಹೋದರ ಗಣೇಶ್ ʼಇಂಡಿಯನ್ ಎಕ್ಸ್ ಪ್ರೆಸ್ʼ ತಿಳಿಸಿದ್ದಾರೆ.