Advertisement

ಬಾಳ ಒಳ್ಳೇವ್ರು ನಮ್ ಬಾಸು

04:00 AM Nov 06, 2018 | |

ಜಗತ್ತಿನಲ್ಲಿ ಅತಿ ಹೆಚ್ಚು ಗಾಸಿಪ್‌ಗ್ಳಿಗೆ ಬಲಿಯಾಗುವವರು, ಬೈಗುಳ ಪಡೆದುಕೊಳ್ಳುವವರು ಬಾಸ್‌ಗಳೇ ಇರಬೇಕು. “ಒಳ್ಳೆಯ ಬಾಸ್‌’ ಎನ್ನುವವರು ಇದುವರೆಗೂ ಹುಟ್ಟಿಯೇ ಇಲ್ಲ ಅನ್ನೋದು ಉದ್ಯೋಗಿಗಳ ಪುಕಾರು. ರಜೆ ಕೊಡಲ್ಲ, ಓವರ್‌ ಟೈಂ ಕೆಲಸ ಮಾಡಿಸ್ತಾರೆ, ಸಂಬಳ ಹೆಚ್ಚಿಸೋಕೆ ಸತಾಯಿಸ್ತಾರೆ, ಎಷ್ಟು ಕೆಲಸ ಮಾಡಿದರೂ ಬಾಸ್‌ಗೆ ತೃಪ್ತಿಯೇ ಆಗಲ್ಲ… ಎಂಬಿತ್ಯಾದಿ ದೋಷಾರೋಪ ಪಟ್ಟಿ ಅವರ ಮೇಲೆ ಇದ್ದೇ ಇದೆ. ಆದರೆ, ರಜಾನೂ ಕೊಡದಿರೋ ಬಾಸ್‌ಗಳ ಮಧ್ಯೆ, ಕಾರು, ಸೈಟ್‌, ವಜ್ರದೊಡವೆ, ಕಂಪನಿ ಷೇರುಗಳನ್ನು ಕೊಡೋ “ದೇವರಂಥ ಬಾಸ್‌’ಗಳಿದ್ದಾರೆ ಎಂದರೆ ನೀವೂ ನಂಬಲೇಬೇಕು…
 
1. ಕಾರು ಕೊಟ್ಟ ಸರದಾರ: ಗುಜರಾತ್‌ನ ಶ್ರೀ ಹರಿಕೃಷ್ಣ ಎಕ್ಸ್‌ಪೋರ್ಟ್ಸ್ನ ಉದ್ಯೋಗಿಗಳಿಗೆ ಈ ದೀಪಾವಳಿಗೆ ಬಂಪರ್‌ ಬೋನಸ್‌ ಸಿಕ್ಕಿದೆ. ವಜ್ರದ ಕಂಪನಿ ಮಾಲೀಕ ಸಾವಿ ಧೋಲಾಕಿಯಾ ತನ್ನ 600 ಉದ್ಯೋಗಿಗಳಿಗೆ ಹಬ್ಬದ ಉಡುಗೊರೆಯಾಗಿ ಕಾರನ್ನು ನೀಡುತ್ತಿದ್ದಾರೆ. ಈ ರೀತಿ ಬೋನಸ್‌ ನೀಡುತ್ತಿರೋದು ಇದೇ ಮೊದಲೇನಲ್ಲ. 2011ರಿಂದ ಕಂಪನಿಯ ಲಾಯಲ್ಟಿ ಪ್ರೋಗ್ರಾಂ ಮೂಲಕ ಪ್ರತಿ ವರ್ಷ ಕೆಲಸಗಾರರಿಗೆ 50 ಕೋಟಿ ರೂ. ಬೋನಸ್‌ ನೀಡಲಾಗುತ್ತದೆ.  2014ರಲ್ಲಿ 500 ಫ್ಲ್ಯಾಟ್ಸ್‌, 525 ಜನರಿಗೆ ವಜ್ರದ ಜ್ಯುವೆಲರಿ, 2015ರಲ್ಲಿ 200 ಫ್ಲ್ಯಾಟ್ಸ್‌, 491 ಕಾರು, 2016ರಲ್ಲಿ, 400 ಫ್ಲ್ಯಾಟ್ಸ್‌, 1260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು ಧೋಲಾಕಿಯಾ.

Advertisement

ಈ ಬಾರಿಯ ಲಾಯಲ್ಟಿ ಪ್ರೋಗ್ರಾಂನಲ್ಲಿ 1500 ಉದ್ಯೋಗಿಗಳು ಆಯ್ಕೆಯಾಗಿದ್ದು, ಅವರಲ್ಲಿ 600 ಮಂದಿ ಕಾರು ಹಾಗೂ ಉಳಿದ 900 ಮಂದಿ ಫಿಕ್ಸ್‌ ಡೆಪಾಸಿಟ್‌ ಸರ್ಟಿಫಿಕೇಟ್‌ ಪಡೆಯುತ್ತಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ, ಒಬ್ಬ ವಿಶಿಷ್ಟಚೇತನ ಮಹಿಳೆಯೂ ಸೇರಿದಂತೆ ನಾಲ್ವರು ಉದ್ಯೋಗಿಗಳು ಪ್ರಧಾನಿ ಮೋದಿಯವರಿಂದ ಕಾರಿನ ಕೀ ಪಡೆದಿದ್ದಾರೆ. ಈಗ ಕೆಲಸಗಾರರೆಲ್ಲ, “ದೀಪಾವಳಿ, ದೀಪಾವಳಿ ಆನಂದ ಲೀಲಾವಳಿ…’ ಎಂದು ಹಾಡುತ್ತಿದ್ದಾರೇನೋ!

2. ತನ್ನ ಸಂಬಳಕ್ಕೇ ಕತ್ತರಿ: ವಾಷಿಂಗ್ಟನ್‌ನ ಗ್ರಾವಿಟಿ ಪೇಮೆಂಟ್ಸ್‌ ಕಂಪನಿಯ ಸಿಇಒ ಡ್ಯಾನ್‌ ಪ್ರೈಸ್‌ ಅನ್ನು ಉದ್ಯೋಗಿಗಳು ಹಾಡಿ ಹೊಗಳುವುದಕ್ಕೆ ಕಾರಣವಿದೆ. ಆತ ಎಷ್ಟು ಧಾರಾಳಿಯೆಂದರೆ, ತನ್ನ ಉದ್ಯೋಗಿಗಳ ಕನಿಷ್ಠ ವಾರ್ಷಿಕ ಸಂಬಳವನ್ನು 70,000 ಡಾಲರ್‌ಗೆ ಏರಿಸಲು ಸ್ವಂತ ಸಂಬಳವನ್ನು, 1 ಮಿಲಿಯನ್‌ ಡಾಲರ್‌ನಿಂದ 70, 000 ಡಾಲರ್‌ಗೆ ಇಳಿಸಿಕೊಂಡಿದ್ದಾನೆ. ಇಂಥ ಬಾಸ್‌ ಸಿಗಲು ಪುಣ್ಯ ಮಾಡಿರಬೇಕಲ್ವಾ?

3. ವಿದ್ಯಾದಾನ ಮಹಾದಾನ!: ಸ್ಟಾರ್‌ಬಕ್‌ ಕಂಪನಿಯ ಸಿಇಒ ಆಗಿದ್ದ ಹವಾರ್ಡ್‌ ಷುಲ್ಟ್ಜ್ 2015ರಲ್ಲಿ ಕಂಪನಿ ಪಾಲಿಸಿಯಲ್ಲಿ ಒಂದು ಹೊಸ ಬದಲಾವಣೆ ತಂದರು. ಉದ್ಯೋಗಿಗಳು ಯಾವುದೇ ವಿಷಯದಲ್ಲಿ ಆನ್‌ಲೈನ್‌ ಡಿಗ್ರಿ ಪಡೆಯಲು ಬಯಸಿದರೂ, ಅವರ ಓದಿನ ಸಂಪೂರ್ಣ ಖರ್ಚನ್ನು ಕಂಪನಿಯ “ಕಾಲೇಜ್‌ ಅಸಿಸ್ಟೆನ್ಸ್‌ ಪ್ರೋಗ್ರಾಂ’ ಮೂಲಕ ಭರಿಸಲಾಗುತ್ತದೆ ಎಂದು ಘೋಷಿಸಿದರು. ಈ ಮೊದಲು, ಒಂದು ಕಾಲೇಜು ಡಿಗ್ರಿ ಪಡೆಯುವ ಖರ್ಚನ್ನು ಕಂಪನಿ ನೀಡುತ್ತಿತ್ತು. 

4. ಮೂರರಲ್ಲಿ ಒಂದರಷ್ಟು ದಾನ: ಟ್ವಿಟರ್‌ನ ಸಿಇಒ ಜ್ಯಾಕ್‌ ಡಾರ್ಸೆ, ಕಂಪನಿಯಲ್ಲಿ ತಾನು ಹೊಂದಿದ್ದ ಷೇರ್‌ನಲ್ಲಿ ಮೂರನೇ ಒಂದರಷ್ಟು ಭಾಗವನ್ನು ಉದ್ಯೋಗಿಗಳಿಗೆ ಹಂಚಿದ್ದಾರೆ. ಅಂದರೆ, 200 ಮಿಲಿಯನ್‌ ಡಾಲರ್‌ ಅನ್ನು ಉದ್ಯೋಗಿಗಳಿಗೆ ಸ್ಟಾಕ್‌ ಆಗಿ ನೀಡಿದ್ದಾರೆ. ಈಗ ಇಡೀ ಕಂಪನಿಯ ಶೇ.1 ಸ್ಟಾಕ್‌ ಕೆಲಸಗಾರರ ಕೈಯಲ್ಲಿದೆ.

Advertisement

5. ಆರು ತಿಂಗಳು ರಜೆ!: ಸ್ವೀಡನ್‌ನ ನ್ಪೋಟಿಫೈ ಕಂಪನಿಯ ಸಿಇ ಡೇನಿಯಲ್‌ ಎಕ್‌ ತನ್ನ ಉದ್ಯೋಗಿಗಳ ಅಚ್ಚುಮೆಚ್ಚಿನ ಬಾಸ್‌. ಹೊಸದಾಗಿ ತಂದೆ- ತಾಯಿಯಾದ ಉದ್ಯೋಗಿಗಳು, ಮನಸ್ಸಿಲ್ಲದ ಮನಸ್ಸಲ್ಲಿ ಕೆಲಸಕ್ಕೆ ಬರೋದು ಬೇಡ. 6 ತಿಂಗಳವರೆಗೆ ವೇತನಸಹಿತ ರಜೆ ತೆಗೆದುಕೊಳ್ಳಬಹುದು ಅಂತ 2015ರಲ್ಲಿ ಹೊಸ ನಿಯಮ ರೂಪಿಸಿದ್ದಾರೆ ಡೇನಿಯಲ್‌.

6. ಎಷ್ಟಾದರೂ ರಜೆ ತಗೊಳ್ಳಿ: ನೆಟ್‌ಫ್ಲಿಕ್ಸ್‌ನ ಸಿಇಒ ರೀಡ್‌ ಹೇಸ್ಟಿಂಗ್ಸ್‌, ರಜೆಯ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಹೊಸದಾಗಿ ತಂದೆ- ತಾಯಿಯಾದ ಉದ್ಯೋಗಿಗಳು, ವೇತನಸಹಿತ ಅನ್‌ಲಿಮಿಟೆಡ್‌ ರಜೆ ತೆಗೆದುಕೊಳ್ಳಬಹುದು.

7. ಬ್ಯುಸಿನೆಸ್‌ ಮಾರಿ ದುಡ್ಡು ಹಂಚಿದ: ಆಸ್ಟ್ರೇಲಿಯಾದ “ಗ್ರೆಂಡಾ ಕಾರ್ಪೋರೇಷನ್‌’ ಎಂಬ ಬಸ್‌ ಕಂಪನಿಯ ಸಿಇಒ ಕೆನ್‌ ಗ್ರೆಂಡಾ, ಕಲಿಯುಗದ ಕರ್ಣನೇ. 2012ರಲ್ಲಿ ತನ್ನ ಅರ್ಧ ಬ್ಯುಸಿನೆಸ್‌ ಅನ್ನು ಮಾರಾಟ ಮಾಡಿ, ಬಂದ 15 ಮಿಲಿಯನ್‌ ಡಾಲರ್‌ ಹಣವನ್ನು ತನ್ನ 1800 ಉದ್ಯೋಗಿಗಳು ಹಂಚಿದ್ದಾನೆ. ಒಬ್ಬೊಬ್ಬರಿಗೆ ಎಷ್ಟು ಸಿಕ್ಕಿತು ಅಂತ ನೀವೇ ಲೆಕ್ಕ ಹಾಕಿ.

8. 150 ಪಟ್ಟು ಹೆಚ್ಚು ಬೋನಸ್‌: ಸಂಬಳದ ಶೇ.10-20 ಬೋನಸ್‌ ಕೊಡೋದು ಪದ್ಧತಿ. ಆದರೆ, ಟರ್ಕಿಷ್‌ ಉದ್ಯಮಿ ನೇವಾತ್‌ ಆಯಿನ್‌ ಕೊಟ್ಟಿರೋ ಬೋನಸ್‌ ಎಷ್ಟು ಗೊತ್ತಾ, ಸಂಬಳದ 150 ಪಟ್ಟು! 2015ರಲ್ಲಿ ತನ್ನ ಕಂಪನಿಯನ್ನು ಮಾರಾಟ ಮಾಡಿದ ನೇವಾತ್‌, ಅದರಲ್ಲಿ ಬಂದ 27 ಮಿಲಿಯನ್‌ ಡಾಲರ್‌ ಲಾಭವನ್ನು 114 ಉದ್ಯೋಗಿಗಳಿಗೆ ಸಮನಾಗಿ ಹಂಚಿದ. ಪ್ರತಿ ಉದ್ಯೋಗಿಯ ಸರಾಸರಿ ಬೋನಸ್‌ 2,37,000 ಡಾಲರ್‌!

Advertisement

Udayavani is now on Telegram. Click here to join our channel and stay updated with the latest news.

Next