Advertisement

ಟೀಮ್‌ ಇಂಡಿಯಾಕ್ಕೆ ಭಾರೀ ದುಬಾರಿ; ಭುವನೇಶ್ವರ್‌ ಕುಮಾರ್‌ ಮತ್ತು 19ನೇ ಓವರ್‌

11:38 PM Sep 21, 2022 | Team Udayavani |

ಮೊಹಾಲಿ: ಮುಂದಿನ ತಿಂಗಳ ಟಿ20 ವಿಶ್ವಕಪ್‌ ಹೋರಾಟಕ್ಕೆ ಅಣಿಯಾಗಲಿರುವ ಭಾರತ ತಂಡಕ್ಕೆ ಸೀನಿಯರ್‌ ಪೇಸ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರ ಡೆತ್‌ ಓವರ್‌ ವೈಫ‌ಲ್ಯ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ. ಇದು ಭಾರತದ ಕ್ರಿಕೆಟ್‌ ಅಭಿಮಾನಿಗಳೆಲ್ಲರ ಅನಿಸಿಕೆಯೂ ಆಗಿದೆ.

Advertisement

ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 208 ರನ್‌ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಭಾರತ ಯಶಸ್ಸು ಕಾಣಬಹುದಿತ್ತು. ಆದರೆ ಕಳಪೆ ಫೀಲ್ಡಿಂಗ್‌ ಮತ್ತು ದುಬಾರಿ ಡೆತ್‌ ಓವರ್‌ನಿಂದಾಗಿ ಸೋಲನ್ನು ಆಹ್ವಾನಿಸಿಕೊಂಡಿತು. ಆಸ್ಟ್ರೇಲಿಯವನ್ನು ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ಯಾಮರಾನ್‌ ಗ್ರೀನ್‌ ಮತ್ತು ಮ್ಯಾಥ್ಯೂ ವೇಡ್‌ ಇಬ್ಬರಿಗೂ ಜೀವದಾನ ನೀಡಿದ್ದು ದುಬಾರಿಯಾಗಿ ಪರಿಣಮಿಸಿತು.

ಟರ್ನಿಂಗ್‌ ಪಾಯಿಂಟ್‌…
ಭಾರತದ ಕಳೆದ 3 ಟಿ20 ಸೋಲುಗಳಲ್ಲಿ ಭುವನೇಶ್ವರ್‌ ಅವರ 19ನೇ ಓವರ್‌ಗಳೇ ಟರ್ನಿಂಗ್‌ ಪಾಯಿಂಟ್‌ ಆಗಿರುವುದು ವಿಪರ್ಯಾಸ. ಏಷ್ಯಾ ಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ 19 ರನ್‌, ಶ್ರೀಲಂಕಾ ಎದುರಿನ ನಿರ್ಣಾಯಕ ಪಂದ್ಯದಲ್ಲಿ 14 ರನ್‌, ಇದೀಗ ಆಸ್ಟ್ರೇಲಿಯ ವಿರುದ್ಧ 16 ರನ್‌ ಸೋರಿ ಹೋಯಿತು. ಮತ್ತೆ ಮತ್ತೆ 19ನೇ ಓವರ್‌ ನಲ್ಲಿ ಭುವನೇಶ್ವರ್‌ ಅವರನ್ನೇ ದಾಳಿಗೆ ಇಳಿಸುವ ನಾಯಕನ ನಡೆಯೂ ಪ್ರಶ್ನಾರ್ಹ.

“ಪಂದ್ಯದ ವೇಳೆ ಇಬ್ಬನಿಯ ಸಮಸ್ಯೆಯೇನೂ ಇರಲಿಲ್ಲ. ಫೀಲ್ಡರ್‌ ಗಳಾಗಲೀ, ಬೌಲರ್‌ಗಳಾಗಲೀ ಟವೆಲ್‌ ಬಳಸಿದ್ದನ್ನು ಕಂಡಿಲ್ಲ. ಅಂದರೆ ನಮ್ಮ ಬೌಲಿಂಗ್‌, ಅದರಲ್ಲೂ 19ನೇ ಓವರ್‌ ತೀರಾ ಕಳಪೆಯಾಗಿತ್ತು ಎಂಬು ದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಭುವನೇಶ್ವರ್‌ ಕಳೆದ 3 ಪಂದ್ಯ ಗಳ 19ನೇ ಓವರ್‌ನಲ್ಲಿ 49 ರನ್‌ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂಬುದಾಗಿ ಗಾವಸ್ಕರ್‌ ಎಚ್ಚರಿಸಿದರು. ಭುವಿ ಈ ಓವರ್‌ಗಳಲ್ಲಿ ಪ್ರತೀ ಎಸೆತಕ್ಕೆ ಸರಾಸರಿ 2.5ಕ್ಕೂ ಹೆಚ್ಚಿನ ರನ್‌ ಬಿಟ್ಟುಕೊಟ್ಟಿದ್ದಾರೆ.

ಪ್ರಥಮ ಎಸೆತಕ್ಕೇ ಸಿಕ್ಸರ್‌
ಮೊಹಾಲಿಯಲ್ಲಿ ಭುವನೇಶ್ವರ್‌ ಆರಂಭದಲ್ಲೇ ದುಬಾರಿಯಾಗಿ ಗೋಚರಿಸಿದ್ದರು. ಇನ್ನಿಂಗ್ಸ್‌ನ ಪ್ರಥಮ ಎಸೆತವನ್ನೇ ಆರನ್‌ ಫಿಂಚ್‌ ಸಿಕ್ಸರ್‌ಗೆ ಬಡಿದಟ್ಟಿ ಆಸೀಸ್‌ಗೆ ಅಬ್ಬರದ ಆರಂಭ ನೀಡಿದ್ದರು. ಸಾಮಾನ್ಯವಾಗಿ ಪವರ್‌ ಪ್ಲೇಯಲ್ಲಿ 5.66ರ ಸರಾಸರಿಯಲ್ಲಿ ರನ್‌ ನೀಡುವ ಭುವನೇಶ್ವರ್‌, ಡೆತ್‌ ಓವರ್‌ಗಳಲ್ಲಿ 9.26 ರನ್‌ ಬಿಟ್ಟು ಕೊಡುತ್ತಿದ್ದಾರೆ.

Advertisement

“ನೆನಪಿಡಿ… ಇದು ಸರಣಿಯ ಮೊದಲ ಪಂದ್ಯ. ಆಸ್ಟ್ರೇಲಿಯ ವಿಶ್ವ ಚಾಂಪಿಯನ್‌ ತಂಡ. ತಮ್ಮಲ್ಲೇ ನಡೆಯುವ ವಿಶ್ವಕಪ್‌ಗೆ ಅದು ಭರ್ಜರಿ ತಯಾರಿ ನಡೆಸುತ್ತಿರುವುದನ್ನು ಗಮನಿಸ ಬೇಕು.

ಜಸ್‌ಪ್ರೀತ್‌ ಬುಮ್ರಾ ಆಗಮನವೊಂದೇ ಭಾರತದ ಡೆತ್‌ ಬೌಲಿಂಗ್‌ ಸಮಸ್ಯೆಗೆ ಪರಿಹಾರ ವಾದೀತು’ ಎಂಬುದು ಸುನೀಲ್‌ ಗಾವಸ್ಕರ್‌ ಅಭಿಪ್ರಾಯ.

ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ, ಕೆ. ಶ್ರೀಕಾಂತ್‌ ಕೂಡ ಭುವನೇಶ್ವರ್‌ ಕುಮಾರ್‌ ಅವರ ಡೆತ್‌ ಓವರ್‌ ಬೌಲಿಂಗ್‌ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next