ಈಗಿನ ನಿನ್ನ ಉರಿಯುವ ಕಣ್ಣುಗಳಲ್ಲೂ ನಾನು ಪ್ರೀತಿ ಕಾಣುತ್ತಿದ್ದೇನೆ. ನಿನಗೂ ಗೊತ್ತು; ಸಿಡಿಯುತ್ತಿರುವ ನನ್ನ ಮನದಲ್ಲೂ ನಿನ್ನ ಪ್ರೇಮ ಜೀವಂತವಾಗಿದೆ ಎಂದು. ಆದರೂ ಹೇಳಿಕೊಳ್ಳಲು ಯಾಕಿಷ್ಟು ಹಮ್ಮು?
ನೀನು ಅಂತರಂಗ ತೆರದಿಟ್ಟ ಆ ದಿನ ನನ್ನದೆಯಲ್ಲಿ ಹೂ ಮಳೆಯ ಸಿಂಚನ. ಕಂಡೂ ಕಾಣದಂತೆ ಕಾಡಿದ ಭಾವಗಳು ನಮ್ಮಿಬ್ಬರ ನಡುವೆ ನೂರಾರು. ಇಬ್ಬರಿಗೂ ಪ್ರೀತಿ ಮೂಡಿದೆ ಎಂದು ಪರಸ್ಪರ ಅರಿತುಕೊಳ್ಳಲೇ ಹಲವು ತಿಂಗಳುಗಳು ಬೇಕಾದವು. ಪುಣ್ಯ, ವರ್ಷಗಳಾಗಲಿಲ್ಲ, ಅದೇ ನನ್ನ ಅದೃಷ್ಟ. ಪ್ರೀತಿ ಮೂಡಿದೆ ಎಂದು ಹೇಳಿಕೊಳ್ಳಲು ಹುಡುಗರು ನಾಚಿಕೊಳ್ಳುತ್ತಾರೆ ಎಂದು ತಿಳಿದಿದ್ದು, ಆವತ್ತು ಉದ್ಯಾನವನದಲ್ಲಿ ಸಂಕೋಚದಿಂದ ರಂಗೇರಿದ ನಿನ್ನ ಮುಖ ಕಂಡಾಗಲೇ. ನೀವು ಹುಡುಗರು ನಾಚಿಕೊಂಡರೆ, ಹೆಣ್ ಮಕ್ಲಿಗಿಂತ ಬೊಂಬಾಟ್ ಆಗಿ ಕಾಣುತ್ತೀರಾ ಮಾರಾಯ! ಆ ಬಿಳಿ ಮುಖ ನಾಚಿಕೆಯಿಂದ ಕೆಂಪೇರಿದ್ದನ್ನು ನೋಡುವುದೇ ಸಂಭ್ರಮವಾಗಿತ್ತು. ನಿನ್ನ ಒದ್ದಾಟ, ಮನದ ಹೊಯ್ದಾಟ ನೋಡುತ್ತಿದ್ದ ನನಲ್ಲಿ ಒಮ್ಮೆಯೇ ರಂಗು ರಂಗಿನ ಭಾವನೆಗಳು ಗರಿಗೆದರಿದ್ದವು. ಕಪ್ಪು ಮೋಡಗಳು ದಟ್ಟವಾಗಿದ್ದ ದಿನ ನೀ ತಂದ ಮಲ್ಲೆ ಹೂವು ನಿನ್ನ ಮನದಿಂಗಿತವನ್ನು ತಿಳಿಸಿತ್ತು. ಅಂದೇ ನೀ ಹೇಳಬೇಕಿತ್ತು ಕಣೋ, ನಲ್ಲೆ ನಿನ್ನ ಮುಡಿಯ ಮಲ್ಲೆ ಮೀಸಲಾಗಿರಲಿ ಈ ಹೃದಯಕ್ಕೆಂದು. ತಕ್ಷಣ ಒಪ್ಪಿ ಬಿಡುತ್ತಿದ್ದೆ.
ಅಂತೂ ಇಂತು ನಮ್ಮಿಬ್ಬರ ಭಾವನೆಗಳು ಕಣ್ಣ ನೋಟದಲ್ಲಿಯೇ ಬದಲಾದವು. ನಮ್ಮಿಬ್ಬರ ಒದ್ದಾಟ ಕಂಡು ಮನಗಳು ತಮ್ಮಷ್ಟಕ್ಕೆ ತಾವೇ ಪ್ರೀತಿ ವ್ಯಕ್ತಪಡಿಸಿಕೊಂಡವು. ಅದಕ್ಕೆ ನಮ್ಮ ನಯನಗಳು ಸಾಕ್ಷಿಯಾದವು. ಆಂತರ್ಯದಲ್ಲಿ ಹುದುಗಿದ್ದ ಭಾವನೆಗಳು ಬದಲಾದ ಮೇಲೆ ನಡೆದ ನಮ್ಮ ಪ್ರೀತಿ ಪಯಣದಲ್ಲಿ ಕನಸುಗಳದ್ದೇ ಸಿಂಹಪಾಲು. ಕೆಲಸದ ಒತ್ತಡದಿಂದ ಸಂದೇಶಗಳ ರವಾನೆ ನಡೆಯದಿದ್ದ ದಿನಗಳಲ್ಲಿ ಎಷ್ಟು ಕಸಿವಿಸಿಗೊಳ್ಳುತ್ತಿತ್ತು ಇಬ್ಬರ ಮನ.
ಮೊದಲಿಗೆಲ್ಲ ಚೆನ್ನಾಗಿದ್ದ ನಮ್ಮಿಬ್ಬರ ಪ್ರೀತಿ ಬರುಬರುತ್ತ ಗಾಢವಾಯಿತು. ಅತಿಯಾದರೆ ಅಮೃತವೂ ವಿಷವೆಂಬ ಮಾತು ನಮ್ಮಿಬ್ಬರ ಪ್ರೀತಿ ಪಯಣದಲ್ಲಿ ನಿಜವಾಯಿತು. ಈಗಲೂ ಇಬ್ಬರಲ್ಲೂ ಪ್ರಶ್ನೆ ಇದೆ; ತಪ್ಪು ಯಾರದೆಂದು, ಯಾರು ಕ್ಷಮೆ ಕೇಳಬೇಕೆಂದು? ಈ ಹಮ್ಮು ಬಿಮ್ಮಿನ ಕಾರಣಕ್ಕಾಗಿಯೇ ನಾವಿಂದು ಎರಡು ಭಿನ್ನ ತೀರಗಳಲ್ಲಿ ನಿಂತಿದ್ದೇವೆ ಅಲ್ವಾ? ಇಂದು ಎದುರಾದರೂ ಕಣ್ತಪ್ಪಿಸಿಕೊಂಡು ಓಡಾಡುವ ನಮ್ಮಿಬ್ಬರ ನಡುವೆ ಆಗಿದ್ದಾದರೂ ಏನು? ಕಾರಣವಲ್ಲದ ಕಾರಣಕ್ಕೆ ಜಗಳ ನಡೆದೇ ಬಿಟ್ಟಿತ್ತು ಅಂದು. ನನ್ನ ಅತಿಯಾದ ನಗು ನಿನ್ನ ಅಹಂ ಅನ್ನು ಕೆಣಕಿತ್ತಾ ಅಥವಾ ಯಾವುದನ್ನೂ ಗಂಭೀರವಾಗಿ ಸ್ವೀಕರಿಸದ ನನ್ನ ಮನಸ್ಥಿತಿ ನಮ್ಮಿಬ್ಬರ ನಡುವೆ ಕದಂಕ ಸೃಷ್ಟಿಸಲು ನೆಪವಾಯಿತಾ? ತಿಳಿಯದು. ನೀ ಹೇಳುವುದು, ಅವತ್ತು ನಾನು ಹಾಗೆ ನಕ್ಕಿದ್ದೇ ಸಮಸ್ಯೆ ಎಂದು! ನಾ ಕೇಳುವುದಿಷ್ಟೇ, ಹಾಗಾದರೆ ನನಗೆ ನಗಲೂ ಸ್ವಾತಂತ್ರ್ಯವಿಲ್ಲವೆ? ಒಟ್ಟಾರೆ ನಿನಗಿಷ್ಟವಾದ ನನ್ನ ನಗುವೇ ಇವತ್ತು ನಮ್ಮಿಬ್ಬರ ಮನಸ್ಸು ಭಿನ್ನಹಾದಿ ತುಳಿವಂತೆ ಮಾಡಿರುವುದು ವಿಪರ್ಯಾಸ.
ಈಗಿನ ನಿನ್ನ ಉರಿಯುವ ಕಣ್ಣುಗಳಲ್ಲೂ ನಾನು ಪ್ರೀತಿ ಕಾಣುತ್ತಿದ್ದೇನೆ. ನಿನಗೂ ಗೊತ್ತು; ಸಿಡಿಯುತ್ತಿರುವ ನನ್ನ ಮನದಲ್ಲೂ ನಿನ್ನ ಪ್ರೇಮ ಜೀವಂತವಾಗಿದೆ ಎಂದು. ಆದರೂ ಹೇಳಿಕೊಳ್ಳಲು ಯಾಕಿಷ್ಟು ಹಮ್ಮು? ಪ್ರೀತಿ ಎಂದರೆ ಸೋತು ಗೆಲ್ಲಬೇಕೆಂದು ತಿಳಿದವಳು ನಾನು. ನಾ ಸೋಲುತ್ತಿರುವುದು ನಿನ್ನದುರಿಗೆ ತಾನೆ? ಮರೆತು ಬಿಡುವ ಆ ಕ್ಷಣವನ್ನು. ಈ ಮನದೊಳಗೆ ಪ್ರೀತಿಯ ಕಾರಂಜಿ ಚಿಮ್ಮುತ್ತಿದೆ. ಹೊರಗೆ ಮಳೆ ಬರುತ್ತಿದೆ, ಸವಿಯಲು ನೀನು ಬರಬೇಕಿದೆಯಷ್ಟೇ. ಕ್ಷಮೆ ಕೇಳಿ ಕಾಯುತ್ತಿರುವೆ.. ಬಂದು ಬಿಡು ನೀ..
ಶ್ರುತಿ ಮಲೆನಾಡತಿ