Advertisement

ಅತ್ಯಂತ ಸವಾಲಿನ ವಿಶ್ವಕಪ್‌: ವಿರಾಟ್‌ ಕೊಹ್ಲಿ

08:59 AM May 23, 2019 | keerthan |

ಮುಂಬಯಿ: ರೌಂಡ್‌ ರಾಬಿನ್‌ ಲೀಗ್‌ ಮಾದರಿಯಿಂದಾಗಿ ಮುಂಬರುವ ವಿಶ್ವಕಪ್‌ ಪಂದ್ಯಾವಳಿ ಅತ್ಯಂತ ಸವಾಲಿನದ್ದಾಗಲಿದೆ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳ ವಾರ ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೋಚ್‌ ರವಿಶಾಸ್ತ್ರೀ ಕೂಡ ಉಪಸ್ಥಿತರಿದ್ದರು.
ಭಾರತಕ್ಕೆ ಅಂಡರ್‌-19 ವಿಶ್ವಕಪ್‌ ತಂದಿತ್ತ ಕಪ್ತಾನನೆಂಬ ಹೆಗ್ಗಳಿಕೆಯ ವಿರಾಟ್‌ ಕೊಹ್ಲಿ ಹಿರಿಯರ ವಿಶ್ವಕಪ್‌ನಲ್ಲಿ ಇದೇ ಮೊದಲ ಸಲ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಿಂದಿನ 3 ವಿಶ್ವಕಪ್‌ಗ್ಳಲ್ಲಿ ಅವರು ಭಾರತ ತಂಡದ ಸದಸ್ಯನಾಗಿದ್ದರು.

Advertisement

ಎಲ್ಲರ ವಿರುದ್ಧ ಆಡುವ ಸವಾಲು
“ವೈಯಕ್ತಿಕವಾಗಿ ಹೇಳಬೇಕೆಂದರೆ ಇದು ಅತ್ಯಂತ ಸವಾಲಿನ ವಿಶ್ವಕಪ್‌. ಇಲ್ಲಿ ಎಲ್ಲರೂ ಎಲ್ಲರ ವಿರುದ್ಧ ಆಡಬೇಕಿದೆ. ಇಲ್ಲಿ ಯಾವುದೇ ತಂಡ ಯಾರನ್ನೂ ಬೇಕಾದರೂ ಸೋಲಿಸಬಹುದು. ಇದನ್ನು ಗಮನದಲ್ಲಿರಿಸಿಕೊಳ್ಳಬೇಕು. ಅಫ್ಘಾನಿಸ್ಥಾನ ತಂಡವನ್ನೇ ಗಮನಿಸಿ, ಈ 4 ವರ್ಷಗಳಲ್ಲಿ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಹಾಗೆಯೇ ಉಳಿದ ತಂಡಗಳೂ ಅತ್ಯಂತ ಪ್ರಬಲವಾಗಿವೆ. ಇಲ್ಲಿ ಪ್ರತೀ ಪಂದ್ಯದಲ್ಲೂ ನಮ್ಮ ಪೂರ್ಣ ಸಾಮರ್ಥ್ಯವನ್ನು ಹೊರಗೆಡಹುವುದು ಅನಿವಾರ್ಯ’ ಎಂದು ಕೊಹ್ಲಿ ಹೇಳಿದರು.

ವಿರಮಿಸಲು ಅವಕಾಶವಿಲ್ಲ
“ಇಲ್ಲಿ ವಿರಮಿಸುವುದಕ್ಕೆ ಅವಕಾಶವೇ ಇಲ್ಲ. ಉಸಿರಾಡುವುದಕ್ಕೂ ಸಮಯವಿಲ್ಲ. ಆರಂಭದಿಂದಲೇ ಒತ್ತಡ ಎದುರಾಗುತ್ತದೆ. ಇದನ್ನು ಅಂದಂದೇ ನಿಭಾಯಿಸಿ ಮುಂದಡಿ ಇಡಬೇಕು. ನಾಳೆ ನೋಡೋಣ, ಮುಂದಿನ ವಾರ ನೋಡೋಣ ಎಂದರೆ ಆಗದು. ಫ‌ುಟ್‌ಬಾಲ್‌ ಲೀಗ್‌ಗಾಗಿ ಆಟಗಾರರು 3-4 ತಿಂಗಳ ಕಾಲ ತಮ್ಮ ತೀವ್ರತೆಯನ್ನು ಕಾಯ್ದುಕೊಂಡಿರುತ್ತಾರೆ. ಇಂಥದೇ ಸ್ಥಿತಿ ಇಲ್ಲಿ ಎದುರಾಗಿದೆ. ಆದ್ದರಿಂದಲೇ ಇದನ್ನು ವಿಶ್ವಕಪ್‌ ಎಂದು ಕರೆಯುವುದು…’ ಎಂಬುದಾಗಿ ಕೊಹ್ಲಿ ಹೇಳಿದರು.

ಬೌಲಿಂಗ್‌ ವಿಭಾಗ ಬಲಾಡ್ಯ
“ಭಾರತದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಐಪಿಎಲ್‌ನಲ್ಲಿ ಆಡಿದರೂ ಬಳಲಿಕೆ ಕಂಡುಬಂದಿಲ್ಲ. ಎಲ್ಲರೂ ಫ್ರೆಶ್‌ ಆಗಿದ್ದಾರೆ. 50 ಓವರ್‌ ಪಂದ್ಯಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ’ ಎಂದು ಕೊಹ್ಲಿ ಹೇಳಿದರು. “ಕುಲದೀಪ್‌ ಮತ್ತು ಚಾಹಲ್‌ ನಮ್ಮ ಸ್ಪಿನ್‌ ವಿಭಾಗದ ಪಿಲ್ಲರ್. ಜತೆಗೆ ಬುಮ್ರಾ, ಶಮಿ, ಭುವನೇಶ್ವರ್‌ ರೂಪದಲ್ಲಿ ತ್ರಿವಳಿ ವೇಗಿಗಳನ್ನು ಹೊಂದಿದ್ದೇವೆ. ಇದು ವಿಶ್ವಕಪ್‌ನಲ್ಲೇ ಭಾರತದ ಅತ್ಯಂತ ಬಲಿಷ್ಠ ವೇಗದ ಬೌಲಿಂಗ್‌ ವಿಭಾಗವಾಗಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹೈ ಸ್ಕೋರಿಂಗ್‌ ಮ್ಯಾಚ್‌
ಇತ್ತೀಚಿನ ಇಂಗ್ಲೆಂಡ್‌-ಪಾಕಿಸ್ಥಾನ ನಡುವಿನ ಏಕದಿನ ಸರಣಿಯನ್ನು ಗಮನಿಸಿ ಹೇಳಿದ ಕೊಹ್ಲಿ, “ಪಿಚ್‌ ಅತ್ಯುತ್ತಮವಾಗಿದೆ. ಬೇಸಗೆಯ ವಾತಾವರಣ ಹಿತಕರವಾಗಿದೆ. ಪರಿಸ್ಥಿತಿ ಕೂಡ ಕ್ರಿಕೆಟಿಗೆ ಅನುಕೂಲಕರವಾಗಿದೆ. ದೊಡ್ಡ ಮೊತ್ತದ ಪಂದ್ಯಗಳನ್ನು ನಿರೀಕ್ಷಿಸಲಾಗಿದೆ. ಆದರೆ ದ್ವಿಪಕ್ಷೀಯ ಸರಣಿಯೊಂದನ್ನು ವಿಶ್ವಕಪ್‌ಗೆ ಹೋಲಿಸಬಾರದು. ಇವೆರಡಕ್ಕೂ ಭಾರೀ ಅಂತರವಿದೆ. ನಾವಿಲ್ಲಿ 260-270ರ ಮೊತ್ತದ ಪಂದ್ಯವನ್ನು ನಿರೀಕ್ಷಿಸಬಹುದು. ಇಲ್ಲಿ ವಿಪರೀತ ಒತ್ತಡವಿರುತ್ತದೆ. ಹೀಗಾಗಿ ಈ ಮೊತ್ತವನ್ನು ಉಳಿಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚಿದೆ’ ಎಂದರು.

Advertisement

ಧೋನಿ ಪಾತ್ರ ನಿರ್ಣಾಯಕ
ಭಾರತಕ್ಕೆ ವಿಶ್ವಕಪ್‌ ಟ್ರೋಫಿಯನ್ನು ಮರಳಿ ತಂದುಕೊಡುವಲ್ಲಿ ಮಹೇಂದ್ರ ಸಿಂಗ್‌ ಧೋನಿ ಪಾತ್ರ ಅತ್ಯಂತ ಮಹತ್ವದ್ದಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕೋಚ್‌ ರವಿಶಾಸ್ತ್ರೀ ಅಭಿಪ್ರಾಪಟ್ಟರು.
“ಧೋನಿ ತಂಡದಲ್ಲಿದ್ದರೆ ಅವರ ಸಂವಹನ, ಸಮಾಲೋಚನೆಗಳೆಲ್ಲ ಅದ್ಭುತವಾಗಿರುತ್ತವೆ. ಓರ್ವ ಕೀಪರ್‌ ಆಗಿ ಅವರು ಕಳೆದ ಅನೇಕ ವರ್ಷಗಳಿಂದ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಕ್ಯಾಚ್‌, ಸ್ಟಂಪಿಂಗ್‌, ರನೌಟ್‌ಗಳೆಲ್ಲ ಅಮೋಘ. ಇಂಥ ಕ್ಷಣಗಳೇ ಪಂದ್ಯದ ತಿರುವಿನಲ್ಲಿ ಮಹತ್ವದ ಪಾತ್ರ ವಹಿಸುವುದು’ ಎಂದು ಶಾಸ್ತ್ರೀ ಹೇಳಿದರು. ಇದು ಧೋನಿ ಆಡುತ್ತಿರುವ 4ನೇ ವಿಶ್ವಕಪ್‌. 2011ರಲ್ಲಿ ಧೋನಿ ಸಾರಥ್ಯದಲ್ಲೇ ಭಾರತ ತನ್ನ 2ನೇ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ್ದನ್ನು ಮರೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next