ಮೈಸೂರು: ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ನಗರದ ಕನಕಗಿರಿ, ಗುಂಡೂರಾವ್ ನಗರ, ಮುನೇಶ್ವರ ನಗರ, ಶ್ರೀರಾಂಪುರ ತಗ್ಗು ಪ್ರದೇಶಗಳ ವ್ಯಾಪ್ತಿಯ ಮಳೆ ನೀರು ಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಕಳೆದ ವರ್ಷ ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಮಳೆ ಅನಾಹುತ ಸಂಭವಿಸಿದ್ದರಿಂದ ದಳವಾಯಿ-119 ಕನಕಗಿರಿ ವ್ಯಾಲಿಗೆ ಒಟ್ಟು 2.8 ಕಿ.ಮೀ ಉದ್ದಕ್ಕೆ ಕಾಂಕ್ರೀಟಿನ ದೊಡ್ಡ ಮಳೆ ನೀರು ಚರಂಡಿ ನಿರ್ಮಾಣ ಮಾಡಲು 27.80 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಹಣ ಬಿಡುಗಡೆಮಾಡಲು ಮಹಾನಗರ ಪಾಲಿಕೆಯಿಂದ ಪ್ರಸ್ತಾವನೆಯನ್ನು ತಯಾರಿಸಿ ಸಲ್ಲಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಮೈಸೂರಿನಲ್ಲಿರುವ ಒಟ್ಟು 76.1 ಕಿ.ಮೀ ಉದ್ದದ ರಾಜಕಾಲುವೆಗಳ ಪೈಕಿ ದಳವಾಯಿ ವ್ಯಾಲಿಯ ರಾಜಕಾಲುವೆ ಸಂಖ್ಯೆ-100, 110, 112 ಮತ್ತು 119 ಹಾಗೂ ಶೆಟ್ಟಿ ಕೆರೆ ವ್ಯಾಲಿಯ ರಾಜಕಾಲುವೆಯ ಸಂಖ್ಯೆ-100 ಮತ್ತು 107 ನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಮೈಸೂರು ಮಹಾನಗರ ಪಾಲಿಕೆಯಿಂದ ಈ ದೊಡ್ಡ ಮಳೆ ನೀರು ಚರಂಡಿಗಳಲ್ಲಿ ಮುಂಜಾಗ್ರತ ಕ್ರಮವಾಗಿ ಮಹಾಮಳೆಯಿಂದಾಗುವ ಅನಾಹುತವನ್ನು ನಿರೀಕ್ಷಿಸಿ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಹಿಂದೆ ತಗ್ಗು ಪ್ರದೇಶಗಳಲ್ಲಿ ಮುಳುಗಡೆಯಾಗಿದ್ದ ಶ್ರೀರಾಂಪುರ, ಸೂರ್ಯ ಬಡಾವಣೆ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಪರಿಶೀಲಿಸಲಾಯಿತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿರುವ ಸೇತುವೆಯ ಕೆಳಭಾಗವನ್ನು ವೀಕ್ಷಿಸಿ ತ್ವರಿತವಾಗಿ ತೆರವುಗೊಳಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್, ಕಾರ್ಯಪಾಲಕ ಇಂಜಿನಿಯರ್ ನಾಗರಾಜಮೂರ್ತಿ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.